ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಅಂಜನಾದ್ರಿ ಬೆಟ್ಟದ ದೇವಾಲಯ ಹುಂಡಿಯಲ್ಲಿ 28.35ಲಕ್ಷ ರೂ. ಸಂಗ್ರಹವಾಗಿದ್ದು, ವಿದೇಶಿ ನೋಟು ಮತ್ತು ನಾಣ್ಯಗಳು ದೊರೆತಿವೆ.
ಮುಜರಾಯಿ ಇಲಾಖೆ ನಿರ್ವಹಣೆಯಲ್ಲಿರುವ ದೇವಾಲಯದ ಹುಂಡಿಯನ್ನು ಭದ್ರತಾ ಹಿತದೃಷ್ಟಿಯಿಂದ ತಿಂಗಳಿಗೊಮ್ಮೆ ತೆರೆಯಲಾಗುತ್ತಿದೆ. ಈ ಬಾರಿ 46 ದಿನಗಳ ನಂತರ ತೆರೆಯಲಾಗಿದ್ದು, 28,35,647 ರೂ. ಸಂಗ್ರಹವಾಗಿದ್ದು, ನೇಪಾಳ, ಕೆನಡಾ ದೇಶದ ನಾಣ್ಯ ಮತ್ತು ನೋಟಗಳಿವೆ.
ಪೊಲೀಸ್ ಬಂದೋಬಸ್ತ್ ಮತ್ತು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಶುಕ್ರವಾರ ಹುಂಡಿ ಹಣ ಎಣಿಸಲಾಗಿದ್ದು, ವಿಡಿಯೋ ಚಿತ್ರೀಕರಣ ಮಾಡಲಾಯಿತು. ಹಣವನ್ನು ಸಣಾಪುರದ ಪಿಕೆಜಿಬಿಯಲ್ಲಿ ಜಮೆ ಮಾಡಲಾಯಿತು. ಕಳೆದ ಬಾರಿ ಹುಂಡಿ ಹಣ ಎಣಿಸಿದಾಗ ರೂ.61.64 ಲಕ್ಷ ರೂ. ಸಂಗ್ರಹವಾಗಿತ್ತು. ದೇವಾಲಯದಲ್ಲಿನ ವ್ಯವಸ್ಥೆ ಮತ್ತು ಭಕ್ತರ ಅನುಕೂಲತೆಗಳ ಬಗ್ಗೆ ದೇವಾಲಯ ಇಒ ಪ್ರಕಾಶರಾವ್ ಮಾಹಿತಿ ನೀಡಿದರು.
ಶಿರಸ್ತೇದಾರರಾದ ರವಿಕುಮಾರ್ ನಾಯಕವಾಡಿ, ಸುನೀಲ್‌ಕುಮಾರ್ ಕುಲ್ಕರ್ಣಿ, ಮಂಜುನಾಥ, ಕವಿತಾ, ಮಹಾಲಕ್ಷ್ಮೀ, ಪೂಜಾ, ಸಂಗೀತಾ, ಆರಾಧನೆ ಸಮಿತಿ ಸದಸ್ಯರಾದ ವಿಶ್ವನಾಥ ಮಾಲಿ ಪಾಟೀಲ್, ಜೋಗದ ರವಿನಾಯ್ಕ, ಬ್ಯಾಂಕ್ ಮ್ಯಾನೇಜರ್ ನವೀನ್ ಕುಮಾರ, ದೇವಾಲಯ ಸಮಿತಿ ವ್ಯವಸ್ಥಾಪಕ ಎಂ.ವೆಂಕಟೇಶ ಸೇರಿ ಮಹಿಳಾ ಸ್ವಯಂ ಸೇವಾ ಸಂಘದ ಸದಸ್ಯರಿದ್ದರು.