ಗಂಗಾವತಿ: ಭತ್ತ ಖರೀದಿಸಿ ಹಣ ನೀಡದ ವರ್ತಕರೊಬ್ಬರನ್ನು ತಾಲೂಕಿನ ಭಟ್ಟರನರಸಾಪುರದ ರೈತರು ಗ್ರಾಮದಲ್ಲಿ ಬುಧವಾರ ಕೂಡಿ ಹಾಕಿ ಹಣಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ.
ಹಣವಾಳದ ಶರಣಬಸಪ್ಪನನ್ನು ಕೂಡಿಹಾಕಿರುವ ರೈತರು, ಭತ್ತ ಖರೀದಿಸಿದ ಹಣ ನೀಡದೇ ಕೈಗೂ ಸಿಗದೆ ಅಲೆದಾಡುತ್ತಿದ್ದಾರೆ ಎಂದು ರೈತರಾದ ಸುರೇಶ, ರಮೇಶ ಇತರರು ಆಕ್ರೋಶ ವ್ಯಕ್ತಪಡಿಸಿದರು.
ಕೆಳೆದರೆಡು ವರ್ಷಗಳಿಂದ ಭತ್ತ ಖರೀದಿ ಮಾಡುತ್ತಿದ್ದ ಶರಣಬಸಪ್ಪ, ಸಿಂಗನಾಳ, ಭಟ್ಟರನರಸಾಪುರ ಸೇರಿ ಗ್ರಾಮಾಂತರ ಪ್ರದೇಶದಲ್ಲಿ ಭತ್ತ ಖರೀದಿಸಿ, ಕೆಲ ರೈತರಿಗೆ ಮುಂಗಡ ಹಣ ನೀಡಿದ್ದಾರೆ. ಬಾಕಿ ಹಣಕ್ಕಾಗಿ ಕೆಲವರಿಗೆ ಚೆಕ್ ನೀಡಿದ್ದರೆ, ಕೆಲವರಿಗೆ ಹಣ ನೀಡುವ ಭರವಸೆ ನೀಡಿದ್ದಾರೆ. ನೀಡಿರುವ ಚೆಕ್ ಬೌನ್ಸ್ ಆಗಿದ್ದರೂ ಸ್ಪಂದಿಸಿಲ್ಲ. ದಿನಕ್ಕೊಂದು ಸಬೂಬು ಹೇಳುತ್ತಾ ದಿನ ದೂಡುತ್ತಿದ್ದ ಶರಣಬಸಪ್ಪನನ್ನು ರೈತರು ನಗರದ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿ, ಭಟ್ಟರನರಸಾಪುರ ಗ್ರಾಮಕ್ಕೆ ಕರೆದೊಯ್ದಿದ್ದಾರೆ. ಮಾಹಿತಿ ತಿಳಿದ ಕನಕಗಿರಿ ಪೊಲೀಸರು ವರ್ತಕನನ್ನು ಠಾಣೆಗೆ ಕರೆದೊಯ್ದಿದ್ದು, ರೈತರು ದೂರು ನೀಡದಿದ್ದರಿಂದ ಬಿಟ್ಟುಕಳಿಸಿದ್ದಾರೆ. ರೈತರು ಹೇಳುವಂತೆ 30ಲಕ್ಷ ರೂ.ಗೂ ಅಧಿಕ ಭತ್ತ ಖರೀದಿಸಿದ್ದು, ಮುಂಗಡವಾಗಿ 10 ರಿಂದ 13ಲಕ್ಷ ರೂ. ಮಾತ್ರ ನೀಡಿದ್ದಾರೆ. ಬಾಕಿ ಹಣಕ್ಕಾಗಿ ರೈತರು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅನಿವಾರ್ಯವಾಗಿ ಕೂಡಿಹಾಕಬೇಕಾಯಿತು ಎಂದರು.
ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಪ್ರತಿಕ್ರಿಯಿಸಿ, ರೈತರಿಗೆ ಹಣ ನೀಡಬೇಕಾದ ವರ್ತಕ ಶರಣಬಸಪ್ಪರನ್ನು ಕನಕಗಿರಿ ಠಾಣೆಯಲ್ಲಿ ವಿಚಾರಣೆಗೊಳಪಡಿಸಿದ್ದು, ವಂಚನೆ ಕುರಿತು ಯಾವುದೇ ದೂರು ಬಂದಿಲ್ಲ ಎಂದರು.