ಗಂಗಾವತಿ: ಯುವ ಸಮುದಾಯಕ್ಕೆ ಎಚ್ಚರಿಕೆ ಸಂದೇಶ ನೀಡಿದ ಸ್ವಾಮಿ ವಿವೇಕಾನಂದರ ತತ್ವ ಸಂದೇಶಗಳು ಜಗತ್ತಿಗೆ ಮಾದರಿಯಾಗಿದ್ದು, ವಿದೇಶದಲ್ಲೂ ಸ್ಫೂರ್ತಿ ತುಂಬಿದ್ದರು ಎಂದು ರೋಟರಿ ಕ್ಲಬ್ ತಾಲೂಕಾಧ್ಯಕ್ಷ ಟಿ. ಆಂಜನೇಯ ಹೇಳಿದರು.
ನಗರದ ರೋಟರಿ ಕ್ಲಬ್ ಕಚೇರಿಯಲ್ಲಿ ತಾಲೂಕು ಘಟಕದಿಂದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದರು. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಎಂಬುದು ಸರ್ವ ಕಾಲಕ್ಕೂ ನೆನೆಯುವ, ಯುವಕರನ್ನು ಒಳ್ಳೆಯ ಕೆಲಸಗಳಿಗೆ ಬಡಿದೆಚ್ಚರಿಸುವ ವಾಕ್ಯವಾಗಿದೆ ಎಂದರು.
ಯುವ ಸೇವಾ ವಿಭಾಗದ ನಿರ್ದೇಶಕ ಎಚ್.ಎಂ. ಮಂಜುನಾಥ ಮಾತನಾಡಿದರು. ಸಿಎ ಪರೀಕ್ಷೆಯಲ್ಲಿ ಪಾಸಾದ ಅಕ್ಷಯ ಕುಮಾರ್ ಆರಾಳ್, ವಿವೇಕ್ ಯಾವಗಲ್‌ರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ನಗರಸಭೆ ಮಾಜಿ ಸದಸ್ಯೆ ಪದ್ಮಾವತಿ ಆಂಜನೇಯ ನಾಯಕ, ರೋಟರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಜಿತ್ ರಾಜ್ ಸುರಾನ, ಪದಾಧಿಕಾರಿಗಳಾದ ವಿಜಯಕುಮಾರ್ ಗಡ್ಡಿ, ಎನ್.ಆರ್. ಶ್ರೀನಿವಾಸ್, ವೀರೇಶ ಯಾವಗಲ್, ಆರಾಳ ಶರಣಪ್ಪ, ಎಂ.ಗುರುರಾಜ, ಜಯಶ್ರೀ, ಜೆ. ನಾಗರಾಜ್, ಸುರೇಶ್ ಬಂಬ್, ಶ್ರೀಧರ ನಾಯಕ, ಎಂ. ರಾಘವೇಂದ್ರ ರಾವ್, ನಾಗೇಶ್ವರರಾವ್ ಇತರರಿದ್ದರು.