ಶಾಸಕರ ಭರವಸೆಗೆ ಪ್ರತಿಭಟನೆ ವಾಪಸ್

<ಬಾಕಿ ವೇತನ ನೀಡಲು ಅಧಿಕಾರಿಗಳಿಗೆ ಸೂಚನೆ>

 

ಗಂಗಾವತಿ: ಬಾಕಿ ವೇತನ ಮತ್ತು ಇತರೆ ಭತ್ಯೆಗಾಗಿ ಪ್ರಗತಿಪರ ಹೊರಗುತ್ತಿಗೆ ಪೌರ ಕಾರ್ಮಿಕರು ಹಮ್ಮಿಕೊಂಡ ಪ್ರತಿಭಟನೆ ಶಾಸಕರ ಮಧ್ಯಸ್ಥಿಕೆಯಲ್ಲಿ ಅಂತ್ಯವಾಗಿದ್ದು, ಸೆ.30ರೊಳಗೆ ಇತ್ಯರ್ಥಗೊಳಿಸುವ ಭರವಸೆ ಸಿಕ್ಕಿದೆ.

9 ತಿಂಗಳ ಬಾಕಿ ವೇತನ ಮತ್ತು ಇತರೆ ಸೌಲಭ್ಯಕ್ಕಾಗಿ ಹೊರಗುತ್ತಿಗೆ ಪೌರ ಕಾರ್ಮಿಕರು ಸೆ.24ರಿಂದ ಪ್ರತಿಭಟನೆ ಆರಂಭಿಸಿದ್ದರಿಂದ ನೈರ್ಮಲೀಕರಣ ಕಾರ್ಯಕ್ಕೆ ಅಡ್ಡಿಯಾಗಿತ್ತು. ಕಾರ್ಮಿಕರ ಹೋರಾಟಕ್ಕೆ ಸ್ಪಂದಿಸಿದ ಶಾಸಕ ಪರಣ್ಣ ಮುನವಳ್ಳಿ ನಗರಸಭೆಗೆ ಮಂಗಳವಾರ ತೆರಳಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರಲ್ಲದೆ, ವೇತನ ವಿಳಂಬಕ್ಕೆ ಕಾರಣರಾದ ನೈರ್ಮಲೀಕರಣ ಸಿಬ್ಬಂದಿಯನ್ನು ಕಾರ್ಮಿಕರ ಎದುರು ತರಾಟೆಗೆ ತೆಗೆದುಕೊಂಡರು.

ಕಾರ್ಮಿಕರ ಬಾಕಿ ವೇತನ ಪಾವತಿ ಕಡತ ಜಿಲ್ಲಾಡಳಿತಕ್ಕೆ ಕಳುಹಿಸದ ಪ್ರಭಾರ ಪೌರಾಯುಕ್ತೆ ಕೆ.ಶೃತಿ ನಿರ್ಲಕ್ಷ್ಯಕ್ಕೂ ಗರಂ ಆದರು. ಸೆ.30ರೊಳಗೆ ಬಾಕಿ ವೇತನ ನೀಡುವ ಭರವಸೆ ಶಾಸಕರು ನೀಡಿದ್ದರಿಂದ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪೌರ ಕಾರ್ಮಿಕರಿಗೆ ನ್ಯಾಯಯುತವಾಗಿ ಬರಬೇಕಿರುವ ಬಾಕಿ ವೇತನ ಕೂಡಲೇ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದೇನೆ ಎಂದರು.

ಕಾರ್ಮಿಕ ಸಂಘಟನೆ ಮುಖಂಡ ಜೆ.ಭಾರದ್ವಾಜ್ ಮಾತನಾಡಿ, ಬಾಕಿ ವೇತನ ಮತ್ತು ಇತರೆ ಸೌಲಭ್ಯ ನೀಡಲು ನಗರಾಡಳಿತ ಒಪ್ಪಿಕೊಂಡಿದ್ದು, ಸೆ.30ರತನಕ ಗಡುವು ನೀಡಲಾಗಿದೆ. ಸ್ಪಂದಿಸದಿದ್ದರೆ ಅ.1ರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಪರಶುರಾಮ್, ಗಿಡ್ಡಪ್ಪ, ಮಾಯಮ್ಮ ಇತರರಿದ್ದರು.