ಬಾಕಿ ಕೂಲಿ ಮತ್ತು ಹೊಸ ಕೆಲಸ ನೀಡುವಂತೆ ಪಟ್ಟು

ಗಂಗಾವತಿ: ಬಾಕಿ ಕೂಲಿ ಮತ್ತು ಹೊಸ ಕೆಲಸ ನೀಡುವಂತೆ ಒತ್ತಾಯಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘದದೊಂದಿಗೆ ತಾಲೂಕಿನ ಎಂಟು ಗ್ರಾಪಂ ವ್ಯಾಪ್ತಿಯ ಕೂಲಿಕಾರರು ನಗರದ ತಾಪಂ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಮುಷ್ಟೂರು, ಗುಂಡೂರು, ಚಿಕ್ಕಜಂತಕಲ್, ವಡ್ಡರಹಟ್ಟಿ, ಬಸಾಪಟ್ಟಣ, ಹೇರೂರು, ಕೇಸರಹಟ್ಟಿ ಮತ್ತು ಹಣವಾಳದಿಂದ ಬಂದಿದ್ದ ಕೂಲಿಕಾರರು ತಾಪಂ ಮತ್ತು ಜಿಪಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೇತೃತ್ವವಹಿಸಿದ್ದ ಸಂಘದ ಅಧ್ಯಕ್ಷ ಎಂ.ಬಸವರಾಜ ಮಾತನಾಡಿ, ಕೆಲಸ ಮಾಡಿಸಿಕೊಂಡ 1000ಕ್ಕೂ ಹೆಚ್ಚು ಕೂಲಿಕಾರರಿಗೆ 6 ತಿಂಗಳಿಂದ ಕೂಲಿ ವಿತರಿಸಿಲ್ಲ. ಪರಿಶೀಲನೆ ನೆಪದಲ್ಲಿ ನೋಡಲ್ ಆಧಿಕಾರಿಗಳಾದ ಜಿಪಂ ಎಇಇಗಳು ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕೆರೆ ಹೂಳೆತ್ತುವ ಕಾಮಗಾರಿಗೆ ನಿಯೋಜನೆಗೊಂಡ ಬೇರೆ ಗ್ರಾಪಂ ಕೂಲಿಕಾರರಿಗೆ ಇದುವರಿಗೂ ಪ್ರಯಾಣ ಭತ್ಯೆ ವಿತರಿಸಿಲ್ಲ. ಹೊಸ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ ತಿಂಗಳಾದರೂ ಕೆಲಸ ನೀಡುತ್ತಿಲ್ಲ. ಬೇಡಿಕೆ ಈಡೇರುವರಿಗೂ ಹೋರಾಟ ಮುಂದುವರಿಸಲಾಗುವುದು ಎಂದರು. ಪದಾಧಿಕಾರಿಗಳಾದ ಶ್ರೀನಿವಾಸ, ಹುಸೇನಪ್ಪ, ಹುಲುಗಪ್ಪ, ಚನ್ನಪ್ಪ, ಹುಲಿಗೆಮ್ಮ, ಗಂಗಮ್ಮ ಮತ್ತಿತರರಿದ್ದರು.