ಗಂಗಾವತಿ: ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಘಟಕದ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ತರಬೇತಿ ಆಯುಕ್ತೆ ಸರೋಜಾ ಅಮರಾವತಿ ಮಾತನಾಡಿ, ದೇಶ-ವಿದೇಶಗಳಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನವಿದ್ದು, ಪ್ರತಿಯೊಂದು ರಂಗಗಳಲ್ಲೂ ಹಕ್ಕನ್ನು ಚಲಾಯಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯಲ್ಲಿರುವ ವಿದ್ಯಾರ್ಥಿನಿಯರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಮಾದರಿಯಾಗುವಂತೆ ಸಲಹೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆ ಜಿಲ್ಲಾ ಆಯುಕ್ತ ಎಚ್.ಎಂ.ಸಿದ್ದರಾಮಯ್ಯಸ್ವಾಮಿ ಮಾತನಾಡಿ, ಮಹಿಳೆ ಎಲ್ಲ ಕ್ಷೇತ್ರದಲ್ಲೂ ಗೌರವ ಹೊಂದಿದ್ದು, ಸ್ವತಂತ್ರ ಬಲದಿಂದ ದೇಶ ಆಳುವ ಸಾಮರ್ಥ್ಯಹೊಂದಿದ್ದಾಳೆ ಎಂದರು.
ಪದಾಧಿಕಾರಿಗಳಾದ ಸೈಯದ್ ಮಹಮ್ಮದ್ ಗುತ್ತಿ, ಅರುಣಾ ವಸದ್, ಎ.ಯರಣ್ಣ, ರೀದಾ ಅಕ್ತಾರ್, ಸುಮಾ, ಯಮನೂರಪ್ಪ, ಹುಸೇನಸಾಬ್ ಮಕಾಂದರ್ ಇತರರಿದ್ದರು.
ರೋಟರಿ ಕ್ಲಬ್: ನಗರದ ರೋಟರಿ ಕ್ಲಬ್ ಕಚೇರಿಯಲ್ಲಿ ರೋಟರಿ ಕ್ಲಬ್ ತಾಲೂಕು ಘಟಕದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಹೊಲಿಗೆ ಯಂತ್ರ ಉಚಿತ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಲಬ್ ತಾಲೂಕಾಧ್ಯಕ್ಷ ಟಿ.ಆಂಜನೇಯ ಮಾತನಾಡಿ, ಮಹಿಳೆಯರಿಗೆ ಮನೆಯಲ್ಲಿ ಸಮಾನತೆ ಜತೆಗೆ ಶಿಕ್ಷಣ ನೀಡುವುದು ಮುಖ್ಯ ಎಂದರು. ಪರಿಸರ ಪ್ರೇಮಿ ಡಿ.ಸಿಂಧು ಅವರನ್ನು ಸನ್ಮಾನಿಸಲಾಯಿತು. ಪದಾಧಿಕಾರಿಗಳಾದ ಮಹೇಶ ಸಾಗರ, ವಾಸುಕೊಳಗದ್, ವಿಜಯಕುಮಾರ ಗಡ್ಡಿ, ಶಕುಂತಲಾ ಕಲ್ಲೂರ್, ಟಿ.ವಿಜಯಲಕ್ಷ್ಮೀ, ಅಮೃತಾ ಪಾಟೀಲ್, ಜೆ.ನಾಗರಾಜ್, ಶ್ರೀಧರ ನಾಯಕ, ಬಸವರಾಜ, ಸುರೇಶ ಸೋಲಂಕಿ ಇತರರಿದ್ದರು.