ಗ್ಯಾಸ್ ಸಿಲಿಂಡರ್ ಜಿಎಸ್‌ಟಿ ರದ್ದುಪಡಿಸಿ

ಗಂಗಾವತಿ: ಗ್ಯಾಸ್ ಸಿಲಿಂಡರ್‌ಗಳಿಗೆ ವಿಧಿಸುವ ಜಿಎಸ್‌ಟಿ ರದ್ದುಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದ ದುರ್ಗಾದೇವಿ ದೇಗುಲದಿಂದ ಬಾಲಾಜಿ ಗ್ಯಾಸ್ ಕಂಪನಿ ಕಚೇರಿವರಿಗೂ ರ‌್ಯಾಲಿ ನಡೆಸಿದ ಜಿಲ್ಲಾ ಕಾರ್ಮಿಕ ಸಂಘಟನೆಗಳ ಮತ್ತು ಗ್ರಾಹಕ ಸಂಘಗಳ ಒಕ್ಕೂಟವು ಕಂಪನಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿತು.

ಒಕ್ಕೂಟದ ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ ಮಾತನಾಡಿ, ಸಿಲಿಂಡರ್ ವಿತರಣೆ ಸಂದರ್ಭದಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದು, ಗ್ಯಾಸ್ ಪರಿಶೀಲನೆ ನೆಪದಲ್ಲಿ ವಸೂಲಿ ಮಾಡುವ 180ರೂ. ಶುಲ್ಕ ರದ್ದುಪಡಿಸಬೇಕಿದೆ. ಮೂಲಬೆಲೆಯಿಲ್ಲದೆ ವಿಧಿಸುವ ಜಿಎಸ್‌ಟಿ ಕೈಬಿಡಬೇಕಿದ್ದು, ಗ್ರಾಹಕರ ಖಾತೆಗೆ ಸಹಾಯಧನ ಸಕಾಲಕ್ಕೆ ಪಾವತಿಯಾಗಬೇಕು. ಸಿಲಿಂಡರ್ ವಿತರಕರಿಗೆ ನಿಗದಿತ ವೇತನ, ಪಿಎ್, ವಿಮೆ ಮತ್ತು ಗುರುತಿನ ಚೀಟಿ ಸೌಲಭ್ಯ ಒದಗಿಸಬೇಕು. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ತಾಲೂಕಾಧ್ಯಕ್ಷ ಕೆ.ಅಡಿವೆಪ್ಪ, ಪದಾಧಿಕಾರಿಗಳಾದ ರಾಜೇಶ್ವರಿ, ಲಿಂಗಪ್ಪ ಹಣವಾಳ, ಎ.ಬಸವರಾಜ, ಜಿ.ವಿಕ್ರಂ, ಗಂಗಮ್ಮ, ಶೇಖಮ್ಮ, ಸಣ್ಣೆಪ್ಪ ಮತ್ತಿತರರಿದ್ದರು.