ಗಂಗಾವತಿ: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ನಗರದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಮಹೇಶ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಚೇರಿಯಲ್ಲಿ ಸಂಜೆ ವೇಳೆ ಕರ್ತವ್ಯದಲ್ಲಿದ್ದಾಗ ಗುತ್ತಿಗೆದಾರ ಕಾರಟಗಿ ತಾಲೂಕಿನ ತಿಮ್ಮಾಪುರದ ಪಂಚಾಕ್ಷರಿ ಎಂಬುವರಿಂದ 1 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪಿಐ ವಿಜಯಕುಮಾರ ನೇತೃತ್ವದ ತಂಡ ದಾಳಿ ನಡೆಸಿದೆ.
ಡ್ರಿಪ್ ಇರಿಗೇಷನ್‌ಗೆ ಸಂಬಂಸಿದ ಸಲಕರಣೆಗಳನ್ನು ಗುತ್ತಿಗೆದಾರ ಪಂಚಾಕ್ಷರಿ ಇಲಾಖೆಗೆ ಪೂರೈಸುತ್ತಿದ್ದು, ತಾಂತ್ರಿಕ ಅನುಮೋದನೆಗಾಗಿ ಮೇಲಕಾರಿಗಳಿಗೆ ಕಡತ ಕಳಿಸಬೇಕಾದರೆ ಒಂದು ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಗುತ್ತಿಗೆದಾರ ಪಂಚಾಕ್ಷರಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಪಿಐ ವಿಜಯಕುಮಾರ ನೇತೃತ್ವದ ತಂಡ ಬೆಳಗ್ಗೆ 11 ಗಂಟೆಯಿಂದಲೇ ಕಚೇರಿ ಸಮೀಪದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾದು ಕುಳಿತಿದ್ದರು. ಸಂಜೆ ವೇಳೆ ಹಣ ಪಡೆಯುತ್ತಿದ್ದಾಗ ತಂಡ ಹಣ ಸಮೇತ ಮಹೇಶ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದೆ.