ಗಂಗಾವತಿ: ಪ್ರಮುಖ ರಸ್ತೆಗಳ ಅವ್ಯವಸ್ಥೆ ಖಂಡಿಸಿ ನಗರದ ವಿರುಪಾಪುರ ತಾಂಡಾದ ಸೇವಾಲಾಲ್ ವೃತ್ತದಲ್ಲಿ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ರಸ್ತೆಯಲ್ಲಿನ ಗುಂಡಿಗಳ ಮುಂದೆ ದೀಪ ಪ್ರಜ್ವಂಲನ ಮೂಲಕ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಂಜಾರ ಸಮಾಜದ ಗೋರ್‌ಸೇನಾ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ನಗರಸಭೆ ಮತ್ತು ತಾಲೂಕಾಡಳಿತ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಸಂಘದ ಅಧ್ಯಕ್ಷ ಪಾಂಡುನಾಯ್ಕ ಮಾತನಾಡಿ, ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಬೃಹತ್ ಗುಂಡಿಗಳು ಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕುಡಿವ ನೀರಿನ ಪೈಪ್ ಲೈನ್ ಕಾಮಗಾರಿ ನೆಪದಲ್ಲಿ ರಸ್ತೆ ಅಗೆಯಲಾಗಿದ್ದು, ಶಾಶ್ವತ ದುರಸ್ತಿಯಾಗುತ್ತಿಲ್ಲ. ರಸ್ತೆ ಅವ್ಯವಸ್ಥೆಯಿಂದ ಅಪಘಾತ ಹೆಚ್ಚುತ್ತಿದ್ದು, ಜೀವ ಭಯದಿಂದ ಸಂಚರಿಸುವ ಸ್ಥಿತಿ ಬಂದಿದೆ.
ಕಲ್ಯಾಣ ಕರ್ನಾಟಕ ಭಾಗದಿಂದ ಬರುವ ಪ್ರವಾಸಿಗರಿಗೆ ಐತಿಹಾಸಿಕ ಪ್ರಸಿದ್ಧ ಹುಲಗಿ, ಅಂಜನಾದ್ರಿ ಮತ್ತು ಆನೆಗೊಂದಿ ಸಂಪರ್ಕಕ್ಕೆ ಇದೇ ಮುಖ್ಯರಸ್ತೆಯಾಗಿದ್ದು, ಹದಗೆಟ್ಟಿದ್ದರಿಂದ ಹಿಡಿಶಾಪ ಹಾಕುವಂತಾಗಿದೆ. ವಿರುಪಾಪುರ ತಾಂಡಾದಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಕುಡಿವ ನೀರು ಪೂರೈಕೆಯಾಗುತ್ತಿಲ್ಲ. ನೈರ್ಮಲೀಕರಣ ತೊಂದರೆಯಿಂದ ರೋಗ ರುಜಿನಗಳು ಹೆಚ್ಚುತ್ತಿವೆ.
ತಾಂಡಾ ಮೂಲಕವೇ ತಾಲೂಕು ಮಟ್ಟದ ಅಧಿಕಾರಿಗಳು ಸಂಚರಿಸುತ್ತಿದ್ದರೂ, ರಸ್ತೆ ದುಸ್ಥಿತಿ ನೋಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಂಡಾದಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ದೂರಿದರು.
ಗೋರ್‌ಸೇನಾ ರಾಜ್ಯ ಉಪಾಧ್ಯಕ್ಷ ಶಿವಪ್ಪ ಜಾಗೋ ಗೋರ್, ಪದಾಧಿಕಾರಿಗಳಾದ ಹನುಮಂತ, ಕೃಷ್ಣನಾಯ್ಕ, ಮಂಜುನಾಥ, ನವಲಿ ಶಂಕರ, ಕೆ.ಆರ್.ಸಂತೋಷ, ಮೌನೇಶ ಶೇಟ್, ಮಂಜುನಾಥ, ಸಂಗಾಪುರ ಪೀರು, ಪರಶುರಾಂ, ರಾಜು, ಅಭಿ ಇತರರಿದ್ದರು.