ಗಂಗಾವತಿ: ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಎಂಇಎಸ್ ಪುಂಡರ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಜನಹಿತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಪಾಟೀಲ್‌ಗೆ ಮನವಿ ಸಲ್ಲಿಸಿದರು.
ವೇದಿಕೆ ಅಧ್ಯಕ್ಷ ರಮೇಶ ಕೋಟಿ ಮಾತನಾಡಿ, ಬೆಳಗಾವಿಯಲ್ಲಿ ಕೆಕೆಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಮಹಾರಾಷ್ಟ್ರದ ಎಂಇಎಸ್ ಸಂಘಟನೆ ಸದಸ್ಯರು ಹಲ್ಲೆ ನಡೆಸಿದಲ್ಲದೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ರಾಜ್ಯದ ನೀರು, ಗಾಳಿ, ಅನ್ನ ತಿಂದು ಬದುಕುತ್ತಿರುವ ಎಂಇಎಸ್ ಪುಂಡರು, ಕನ್ನಡಿಗರ ಮೇಲೆ ವಿನಾಕಾರಣ ಹಲ್ಲೆ ನಡೆಸುತ್ತಿದ್ದು ಭಾಷೆ ಅಭಿಮಾನವನ್ನು ಕೆಣಕುತ್ತಿದ್ದಾರೆ.
ಕನ್ನಡಿಗರು ಅನ್ಯ ಭಾಷೆಯನ್ನು ಪ್ರೀತಿಸುತ್ತಾರೆ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೋರಾಟಕ್ಕೂ ಸಿದ್ಧರಿದ್ದಾರೆ. ಎಂಇಎಸ್ ಪುಂಡಾಟಿಕೆಯನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಾನೂನು ಕೈಗೊಳ್ಳಬೇಕಿದೆ. ಅದರಂತೆ ತಾಲೂಕಿನ ವಿರುಪಾಪುರಗಡ್ಡಿಯ ಕಂಡಕ್ಟರ್ ಮೇಲೆ ನಡೆದಿರುವ ಹಲ್ಲೆ ಖಂಡನೀಯವಾಗಿದ್ದು, ಆರೋಪಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಪ್ರಭು, ಜಿಲಾನಿಪಾಷ, ಚಂದ್ರಶೇಖರ, ಮದನಕುಮಾರ, ಭೋಗೇಶ ಆನೆಗೊಂದಿ, ಚಂದ್ರು, ರುಕ್ಮಿಣಿ, ರಾಜೇಶ ನಾಯಕ, ಮಲ್ಲಿಕಾರ್ಜುನ, ಪ್ರಕಾಶ್ ಇತರರಿದ್ದರು.