ಗಂಗಾವತಿ: ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಸರ್ಕಾರದಿಂದ ನಿಯೋಜನೆಗೊಂಡಿರುವ ಅರ್ಚಕರಿಗೆ ಮಾತ್ರ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಪ್ರತಿಭಟಿಸಿ ತಹಸೀಲ್ದಾರ್ ಯು.ನಾಗರಾಜಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಹಕ್ಕನ್ನು ಸರ್ಕಾರವೇ ವಹಿಸಿಕೊಳ್ಳಬೇಕಿದ್ದು, ಹೊರಗಿನ ವ್ಯಕ್ತಿಗಳಿಗೆ ನೀಡಬಾರದು. ಇತ್ತೀಚಿಗೆ ಕೋರ್ಟ್ ಮೂಲಕ ಬೆಟ್ಟಕ್ಕೆ ಬಂದಿರುವ ವಿದ್ಯಾದಾಸ ಬಾಬಾಗೆ ಯಾವುದೇ ರೀತಿಯಲ್ಲಿ ಪೂಜೆ ಮಾಡುವ ಹಕ್ಕು ನೀಡಬಾರದು. ಇತ್ತೀಚಿಗೆ ಬೆಟ್ಟದಲ್ಲಿ ಇಲಾಖೆ ಮತ್ತು ವಿದ್ಯಾದಾಸಬಾಬಾ ನಡುವೆ ಸಂಘರ್ಷ ಶುರುವಾಗಿದ್ದು, ಭಕ್ತರಿಗೆ ತೊಂದರೆಯಾಗುತ್ತಿದೆ. ಅತಿ ಹೆಚ್ಚು ಆದಾಯ ಹೊಂದಿರುವ ದೇವಾಲಯದಲ್ಲಿ ಯಾವುದೇ ಕಾರಣಕ್ಕೂ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗಬಾರದು. ಸಂಘರ್ಷ ತಡೆಗಟ್ಟಲು ಸರ್ಕಾರದಿಂದ ನಿಯೋಜಿಸಿದ ಅರ್ಚಕರಿಗೆ ಮಾತ್ರ ಪೂಜೆ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಹಸೇನಸಾಬ್, ಶಂಕರ ಪೂಜಾರಿ, ಉಮೇಶಬಂಡಿ, ಬಸವರಾಜ, ಮುತ್ತ ಈಳಿಗೇರ್, ಪುಂಡಲೀಕ್, ಚೇತನ್, ಭಾಷಾ ಸಂಗಾಪುರ, ಶರಣಪ್ಪ ನಾಯಕ ಇತರರಿದ್ದರು.