ಗಂಗಾವತಿ: ತಾಲೂಕಿನ ನವಲಿ ಬಳಿ ಸಮತೋಲನ ಜಲಾಶಯಕ್ಕೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.

ತಾಲೂಕಿನ ಕೇಸಕ್ಕಿ ಹಂಚಿನಾಳ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬೋಂಗಾ ದುರಸ್ತಿ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಮಾನಾಂತರ ಜಲಾಶಯದ ಕೊರತೆಯಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು, ನವಲಿ ಬಳಿ ನಿರ್ಮಾಣಕ್ಕಾಗಿ ಡಿಪಿಆರ್ ಸಿದ್ಧಪಡಿಸಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಸಾಧ್ಯತೆಗಳಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಸಮಾನಾಂತರ ಕಾಲುವೆ ನಿರ್ಮಾಣದ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ನವಲಿ ಜಲಾಶಯದ ನಂತರ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎಂದರು.
ಅಧಿಕಾರಿಗಳ ಮತುವರ್ಜಿಯಿಂದ ಬೋಂಗಾ ದುರಸ್ತಿ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು, 24 ಗಂಟೆಯೊಳಗೆ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಶಿವಪುರ ಮತ್ತು ಸಣಾಪುರ ಜಲಾಶಯದಲ್ಲಿ ನೀರು ಹಿಡಿದಿಟ್ಟುಕೊಂಡು ಹಂತಹಂತವಾಗಿ ಕಾಲುವೆಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಸೋರಿಕೆ ಕಂಡು ಬಂದ ಜಾಗದಲ್ಲಿ ಗ್ರೋವೆಟಿಂಗ್, ಹೊರಭಾಗದಲ್ಲಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ರೈತರಿಗೆ ತೊಂದರೆಯಾಗದಂತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ನುರಿತ ಅಧಿಕಾರಿಗಳು ಮತ್ತು ವಿನ್ಯಾಸಕರ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಖಾದಿ ಗ್ರಾಮದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಹರವಿ ಶಂಕರಗೌಡ, ಜಲಸಂಪನ್ಮೂಲ ಇಲಾಖೆ ಪ್ರಭಾರ ಇಇ ಸತ್ಯಪ್ಪ, ಎಇಇಗಳಾದ ಸೂಗಪ್ಪ, ಈ.ಕೃಷ್ಣಪ್ಪ, ವಿನ್ಯಾಸಕಾರ ಬಸಪ್ಪ ಜಾನೇಕರ್ ಇತರರಿದ್ದರು.