ಗಂಗಾವತಿ: ದೇಸಿ ಪರಂಪರೆ ತಿಳಿಸುವ ನಿಟ್ಟಿನಲ್ಲಿ ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್‌ನಲ್ಲಿ ಸೋಮವಾರ ಚಿಣ್ಣರ ಜನಪದ ಜಾತ್ರೆಯಲ್ಲಿ ನಡೆಯಿತು.
ಕಮ್ಮಾರಿಕೆ, ನೇಕಾರಿಕೆ, ಕುಂಬಾರಿಕೆ, ತೋಟದ ಮನೆಯಿದ್ದು, ಕೆರೆ ಮತ್ತು ಕೃಷಿ ಚಟುವಟಿಕೆ ಭತ್ತದ ಗದ್ದೆ, ಭತ್ತ ಕಟ್ಟುವುದು, ಬೀಸುವ ಕಲ್ಲು, ಬೆಣ್ಣೆ ಕಡಿಯುವುದು, ಸಂತೆ, ದೇಗುಲ, ಭಜನೆ ತಂಡ ಪರಿಕಲ್ಪನೆ ಸೇರಿ ಗ್ರಾಮೀಣ ಪರಿಸರದ ಮನೆಗಳ ಚಟುವಟಿಕೆಗಳನ್ನು ಪರಿಚಯಿಸಲಾಯಿತು. ದೇಸಿ ಉಡುಪಿನೊಂದಿಗೆ ಭಾಗವಹಿಸಿದ್ದ ಮಕ್ಕಳು ಗುಡಿ ಕೈಗಾರಿಕೆ ಪ್ರೋತ್ಸಾಹಿಸುವಂತೆ ಸಂದೇಶ ನೀಡಿ, ಶಾಲಾ ಆವರಣದಲ್ಲೇ ಗ್ರಾಮ ನಿರ್ಮಿಸಿ, ಜನಪದ ಜಗತ್ತಿನ ಆನಾವರಣಗೊಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಪ್ರೊ.ಶಂಭು ಬಳಿಗಾರ್ ಮಾತನಾಡಿ, ಮಕ್ಕಳಿಗೆ ಜನಪದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕಿದೆ. ಪಠ್ಯದೊಂದಿಗೆ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರಿಪಿಸುವಂತೆ ಸಲಹೆ ನೀಡಿದರು. ಇದಕ್ಕೂ ಮುನ್ನ ಗ್ರಾಮದಾದ್ಯಂತ ವಿವಿಧ ಕಲಾ ತಂಡಗಳೊಂದಿಗೆ ಜನಪದ ಮೆರವಣಿಗೆ ನೆರವೇರಿಸಲಾಯಿತು. ಕಳೆದ ವರ್ಷದ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಬೋಧಿಸಿದ ಶಿಕ್ಷಕರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಮಾಜಿ ಸಚಿವ ಶಿವರಾಜ ತಂಗಡಗಿ, ಜಿಪಂ ಸದಸ್ಯೆ ವಿಜಯಲಕ್ಷ್ಮಿ ಪ್ರಭಾಕರ, ತಾಪಂ ಸದಸ್ಯ ಮಹ್ಮದ್ ರಫಿ, ಎಪಿಎಂಸಿ ಸದಸ್ಯ ರೆಡ್ಡಿ ಶ್ರೀನಿವಾಸ, ಬಿಇಒ ಸೋಮಶೇಖರಗೌಡ, ಶಾಲಾಡಳಿತ ಮಂಡಳಿ ಗೌರವಾಧ್ಯಕ್ಷ ನೆಕ್ಕಂಟಿ ಸೂರಿಬಾಬು, ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಅಧ್ಯಕ್ಷ ಬಿ.ಪಾರ್ಥಸಾರಥಿ, ಸದಸ್ಯರಾದ ರಾಮರಾವ್, ನರಸಿಂಹಮೂರ್ತಿ, ಪ್ರಿಯಾಕುಮಾರಿ, ಚೆನ್ನುಪಾಟಿ ಪ್ರಭಾಕರ ಇತರರು ಇದ್ದರು.