ಭರವಸೆ ಈಡೇರಿಸದ ಪ್ರಧಾನಿ ಮೋದಿಗೆ ಗಂಗಾಮಾತೆ ಶಿಕ್ಷೆ ನೀಡುತ್ತಾಳೆ: ಮಾಯಾವತಿ

ವಾರಾಣಸಿ: ಗಂಗಾ ನದಿಯನ್ನು ಶುದ್ಧಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಯನ್ನು ಈಡೇರಿಸಲು ಅವರು ವಿಫಲರಾಗಿದ್ದಾರೆ. ಭರವಸೆ ಈಡೇರಿಸದ ಮೋದಿಯನ್ನು ಸೋಲಿಸುವ ಮೂಲಕ ಗಂಗಾಮಾತೆ ಅವರಿಗೆ ಶಿಕ್ಷೆ ನೀಡಲಿದ್ದಾಳೆ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.

ವಾರಾಣಸಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಯಾವತಿ ‘2014ರ ಚುನಾವಣೆ ಸಂದರ್ಭದಲ್ಲಿ ಮೋದಿ ತಾವು ಅಧಿಕಾರಕ್ಕೆ ಬಂದರೆ ಗಂಗಾನದಿಯನ್ನು ಶುದ್ಧಗೊಳಿಸುವುದಾಗಿ ತಿಳಿಸಿದ್ದರು. ಗಂಗಾ ಮಾತೆ ಮೋದಿಗೆ ಆಶೀರ್ವಾದ ನೀಡಿ ಅವರನ್ನು ಅಧಿಕಾರಕ್ಕೆ ತಂದಿದ್ದಳು. ಆದರೆ ಅವರು ತಾವು ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ನಮಾಮಿ ಗಂಗಾ ಯೋಜನೆಯ ಮೂಲಕ ಕೋಟ್ಯಂತರ ರೂ. ಹಣ ವಿನಿಯೋಗಿಸಿದರೂ ಗಂಗಾ ನದಿಯನ್ನು ಶುದ್ಧಗೊಳಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಾಗಲಿಲ್ಲ ಎಂದು ಮಾಯಾವತಿ ಆರೋಪಿಸಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್,​ ಪ್ರಧಾನಿ ಮೋದಿ ಅವರು ವಾರಾಣಸಿಯನ್ನು ಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ತಮ್ಮ ಭರವಸೆಯನ್ನು ಈಡೇರಿಸಿಲ್ಲ. ಗಂಗಾ ನದಿಯನ್ನು ಶುದ್ಧಗೊಳಿಸುವುದಾಗಿ ತಿಳಿಸಿದ್ದರು, ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ. ಏಕೆಂದರೆ ಅವರಿಗೆ ಗಂಗಾ ನದಿ ಶುದ್ಧಗೊಳ್ಳುವುದು ಬೇಕಾಗಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದರು. (ಏಜೆನ್ಸೀಸ್​)