ಗಂಗಾ ಕಲ್ಯಾಣದಲ್ಲಿ ಹರಿಯದ ನೀರು!

ದಕ್ಷಿಣ ಕನ್ನಡ 1177 ಕೊಳವೆ ಬಾವಿ ನಿಷ್ಪ್ರಯೋಜಕ

– ಪಿ.ಬಿ.ಹರೀಶ್ ರೈ ಮಂಗಳೂರು
ಕೊಳವೆ ಬಾವಿ ಕೊರೆಯಲಾಗಿದೆ. ಪಂಪ್‌ಸೆಟ್ ಅಳವಡಿಸಿಲ್ಲ. ಪಂಪ್‌ಸೆಟ್ ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಿಲ್ಲ. ಫಲಾನುಭವಿಗಳ ಆಯ್ಕೆ ನಡೆದು ಎರಡು ವರ್ಷ ಕಳೆದಿದೆ. ಕೊಳವೆ ಬಾವಿಯೇ ಇಲ್ಲ.. ಇದು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಣ್ಣ ರೈತರಿಗೆ ಜಾರಿ ಮಾಡಿರುವ ಗಂಗಾ ಕಲ್ಯಾಣ ಯೋಜನೆ ಅವಸ್ಥೆ..!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ವಿವಿಧ ನಿಗಮಗಳ ಮೂಲಕ ಒಟ್ಟು 1,527 ಕೊಳವೆ ಬಾವಿ ಕೊರೆಯಲಾಗಿದೆ. ಇದರಲ್ಲಿ 594ಕ್ಕೆ ಮಾತ್ರ ಪಂಪ್‌ಸೆಟ್ ಅಳವಡಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ ನೀಡಿದ್ದು ಕೇವಲ 350 ಕೊಳವೆ ಬಾವಿಗಳಿಗೆ. 1177 ಕೊಳವೆಬಾವಿಗಳು ನಿಷ್ಪ್ರಯೋಜಕ ಸ್ಥಿತಿಯಲ್ಲಿವೆ. ಇನ್ನೊಂದೆಡೆ ಯೋಜನೆಯಡಿ ಆಯ್ಕೆಯಾದ 300 ಫಲಾನುಭವಿಗಳ ಜಮೀನಿನಲ್ಲಿ ಇನ್ನೂ ಕೊಳವೆ ಬಾವಿ ಕೊರೆದಿಲ್ಲ.

ನಿಗಮಗಳಿಂದ ಜಾರಿ: ಪರಿಶಿಷ್ಟ ಜಾತಿ ರೈತರಿಗೆ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಪರಿಶಿಷ್ಟ ಪಂಗಡದವರಿಗೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಹಿಂದುಳಿದ ವರ್ಗದ ರೈತರಿಗೆ ದೇವರಾಜು ಅರಸು ಅಭಿವೃದ್ಧಿ ನಿಗಮ ಮೂಲಕ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಅಂಬೇಡ್ಕರ್ ನಿಗಮ ಮತ್ತು ವಾಲ್ಮೀಕಿ ನಿಗಮ ವತಿಯಿಂದ 2016-17 ಮತ್ತು 2017-18ರಲ್ಲಿ ಒಟ್ಟು 548 ಕೊಳವೆ ಬಾವಿ ಕೊರೆಯಲಾಗಿದೆ. ಆದರೆ ಇದುವರೆಗೆ ಪಂಪ್‌ಸೆಟ್ ಅಳವಡಿಕೆಯಾಗಿಲ್ಲ. 2015-16ರಲ್ಲಿ ಪಂಪ್‌ಸೆಟ್ ಅಳವಡಿಸಿದ 41 ಫಲಾನುಭವಿಗಳಿಗೆ ಇದುವರೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ದೇವರಾಜು ಅರಸು ಅಭಿವೃದ್ಧಿ ನಿಗಮ ವತಿಯಿಂದ ಕೊರೆದ 859 ಕೊಳವೆ ಬಾವಿಗಳು ಪಂಪ್‌ಸೆಟ್ ಅಳವಡಿಕೆಯಾಗದೆ, ವಿದ್ಯುತ್ ಸಂಪರ್ಕವಿಲ್ಲದೆ ನಿಷ್ಪ್ರಯೋಜಕ ಸ್ಥಿತಿಯಲ್ಲಿವೆ.

ಏನಿದು ಗಂಗಾ ಕಲ್ಯಾಣ?: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗದ ಸಣ್ಣ ಹಾಗೂ ಅತಿ ಸಣ್ಣ ರೈತರ ಜಮೀನುಗಳಿಗೆ 2.5 ಲಕ್ಷ ರೂ.ವೆಚ್ಚದಲ್ಲಿ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಿ, ಪಂಪ್‌ಸೆಟ್ ಅಳವಡಿಕೆ ಹಾಗೂ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. 2 ಲಕ್ಷ ರೂ. ಸಹಾಯ ಧನ ಹಾಗೂ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ 50 ಸಾವಿರ ರೂ. ಸಾಲ ಸೌಲಭ್ಯ ಕಲ್ಪಿಸಲಾಗಿದೆ.

ಪಂಪ್‌ಸೆಟ್ ಅಳವಡಿಕೆ ಟೆಂಡರ್ ಹೊರಗಿನವರು ವಹಿಸಿದ್ದು, ಬಳಿಕ ಸ್ಥಳೀಯರಿಗೆ ಒಳಗುತ್ತಿಗೆ ನೀಡಿದ್ದಾರೆ. ಅವರು ಸಕಾಲದಲ್ಲಿ ಕೆಲಸ ಪೂರೈಸಿಲ್ಲ. ವಿದ್ಯುತ್ ಸಂಪರ್ಕದ ಟೆಂಡರ್ ಮೆಸ್ಕಾಂ ಮೂಲಕ ನಡೆಯುತ್ತಿದೆ. ಸಮನ್ವಯ ಕೊರತೆಯಿಂದ ಕೆಲವು ತೊಡಕು ಉಂಟಾಗಿತ್ತು. 2016-17ರಲ್ಲಿ ಫಲಾನುಭವಿಗಳ ಆಯ್ಕೆ ನಡೆದಿತ್ತು. ಆದರೆ ಟೆಂಡರ್ ಪ್ರಕ್ರಿಯೆ ನಡೆದಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಎರಡು ವರ್ಷದ ಗುರಿ ಸಾಧನೆ ಮಾಡಲಾಗುತ್ತಿದೆ. ಮುಂದಿನ 2-3 ತಿಂಗಳಲ್ಲಿ ಪಂಪ್‌ಸೆಟ್ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಪೂರ್ಣಗೊಳ್ಳಲಿದೆ.
– ಅನಿತಾ ಮಡ್ಲೂರು, ದ.ಕ. ಜಿಲ್ಲಾ ವ್ಯವಸ್ಥಾಪಕಿ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ

ಉಡುಪಿ ಜಿಲ್ಲೆ 500ಕ್ಕೂ ಅಧಿಕ ವ್ಯರ್ಥ
ಉಡುಪಿ: ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಮೂಲಕ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 554 ಬಾವಿ-ಕೊಳವೆ ಬಾವಿಗಳನ್ನು ತೋಡಲಾಗಿದೆ. ಆದರೆ ಹೆಚ್ಚಿನ ಕಡೆ ಪಂಪ್‌ಸೆಟ್ ಅಳವಡಿಕೆಯಾಗದೆ ರೈತರಿಗೆ ಉಪಯೋಗಕ್ಕೆ ಸಿಕ್ಕಿಲ್ಲ.
2015-16ನೇ ಸಾಲಿನಲ್ಲಿ 261 ತೆರೆದ ಬಾವಿ ಮತ್ತು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಇವುಗಳಲ್ಲಿ 183 ಕಡೆ ಪಂಪ್‌ಸೆಟ್ ಅಳವಡಿಕೆಯಾಗಿದ್ದು, 78 ಇನ್ನೂ ಬಾಕಿ ಇದೆ. 114 ಕಡೆ ಇನ್ನಷ್ಟೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ.
2016-17ನೇ ಸಾಲಿನಲ್ಲಿ ಮಂಜೂರಾದ 198 ತೆರೆದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ 158 ಮಾತ್ರ ಕೊರೆಯಲಾಗಿದೆ. ಇವುಗಳಲ್ಲಿ ಕೇವಲ 20 ಪಂಪ್‌ಸೆಟ್‌ಗಳಷ್ಟೇ ಅಳವಡಿಕೆಯಾಗಿದ್ದು, ಕೆಲವಕ್ಕೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 130ಕ್ಕೂ ಅಧಿಕ ಕೊಳವೆ ಬಾವಿ/ಬಾವಿಗಳಿಗೆ ಇನ್ನಷ್ಟೇ ಪಂಪ್‌ಸೆಟ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಬೇಕಿದೆ.
2017-18ನೇ ಸಾಲಿನಲ್ಲಿ 184 ಬಾವಿ/ಕೊಳವೆ ಬಾವಿ ಮಂಜೂರಾಗಿದ್ದು, ಕೊರೆದಿರುವುದು 135 ಮಾತ್ರ. ಇವುಗಳಲ್ಲಿ ಎಲ್ಲೂ ಪಂಪ್‌ಸೆಟ್ ಅಳವಡಿಕೆಯಾಗಿಲ್ಲ, ವಿದ್ಯುತ್ ಸಂಪರ್ಕ ನೀಡಿಲ್ಲ.

ಗಂಗಾ ಕಲ್ಯಾಣ ಯೋಜನೆಯಡಿ 2016-17 ಮತ್ತು 2017-18ನೇ ಸಾಲಿನ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯಲು 2017ರ ಅ.28ಕ್ಕೆ ಟೆಂಡರ್ ಕರೆಯಲಾಗಿದ್ದು, 2018ರ ಮಾ.22ರಂದು ಕಾರ‌್ಯಾದೇಶ ನೀಡಲಾಗಿದೆ. ಮಾ.28ಕ್ಕೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತವಾಗಿತ್ತು. ಬಳಿಕ ಮೇ 19ಕ್ಕೆ ಜಿಲ್ಲಾ ಕಚೇರಿಯಿಂದ ಗುತ್ತಿಗೆದಾರರಿಗೆ ಕೊಳವೆ ಬಾವಿ ಕೊರೆಸಲು ಆದೇಶ ನೀಡಿದ್ದರೂ, ಮಳೆಗಾಲ ಆರಂಭವಾದ್ದರಿಂದ ಯೋಜನೆ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗಿಲ್ಲ.
– ಮೊಹಮ್ಮದ್ ಸಫಾನ್, ಉಡುಪಿ ಜಿಲ್ಲಾ ವ್ಯವಸ್ಥಾಪಕ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ