ಕಿಕ್ಕೇರಿ: ಹೋಬಳಿಯಾದ್ಯಂತ ಶುಕ್ರವಾರ ಗಂಗೆ-ಗೌರಿ ಹಬ್ಬದ ಸಂಭ್ರಮವನ್ನು ಸಡಗರದಿಂದ ಆಚರಣೆ ಮಾಡಿದರು.
ಕೋವಿಡ್, ಬರಗಾಲದ ಕರಿನೆರಳಿನಿಂದ ಮುಕ್ತವಾಗಿ ಪ್ರಸಕ್ತ ವರ್ಷ ಸಮೃದ್ಧಿಯಾಗಿ ಮಳೆ ಬಿದ್ದ ಸಂತಸದಲ್ಲಿ ರೈತಾಪಿ ಜನತೆ ಗಂಗೆ-ಗೌರಿಯನ್ನು ಮನೆ ಮನೆಗಳಲ್ಲಿ ಪೂಜಿಸಿದರು.
ಬಸೆಟ್ಟಿ ಅಯ್ಯನವರ ಮನೆಯಿಂದ ಅರ್ಚಕ ನಾಗೇಂದ್ರ ಸಾಂಪ್ರದಾಯಿಕ ಪೂಜೆ ಸಲ್ಲಿಸಲು ಪವಿತ್ರ ಗಂಗೆಯ ಪೂಜೆ ನೆರವೇರಿಸಿದರು. ಗಂಗೆಯಲ್ಲಿ ಮುಳುಗಿ ಕೈಗೆ ಸಿಕ್ಕ ಪವಿತ್ರ ವಸ್ತುವನ್ನು ವಸ್ತ್ರದಲ್ಲಿ ಕಟ್ಟಿಕೊಂಡು ತಂದು ಮನೆಯಲ್ಲಿ ಗಂಗಾಮಾತೆಯನ್ನು ಪೀಠದಲ್ಲಿ ಆಸೀನ ಮಾಡಿದರು. ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜಿಸಿದರು. ವಿವಿಧ ಹಣ್ಣಹಂಪಲುಗಳನ್ನು ಇಟ್ಟು ನೈವೇದ್ಯ ಅರ್ಪಿಸಿದರು. ಮಹಿಳೆಯರು ಗಂಗೆ-ಗೌರಿ ಪ್ರತಿಷ್ಠಾಪನೆ ಸ್ಥಳಕ್ಕೆ ತೆರಳಿ ಬಾಗಿನ ಅರ್ಪಿಸಿ ಮುಡಿತುಂಬಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಗಂಗಾಮತಸ್ಥ ಸಮುದಾಯದವರು ಇದೇ ರೀತಿ ಅಮಾನಿಕೆರೆಯಲ್ಲಿ 3ಬಾರಿ ಮುಳುಗಿ ಕೈಗೆ ಸಿಕ್ಕ ವಸ್ತುವನ್ನು ಗಂಗೆ ಗೌರಿ ಅಮ್ಮನವರಂತೆ ಹಳದಿ ಬಟ್ಟೆಯಲ್ಲಿ ಕಟ್ಟಿ ಪ್ರತ್ಯೇಕವಾಗಿ ತೊಟ್ಟಿಲುವಿನಲ್ಲಿ ಪ್ರತಿಷ್ಠಾಪಿಸಿದರು. ದೇವಿಯ ಎರಡು ತೊಟ್ಟಿಲುಗಳನ್ನು ಸಾಂಪ್ರದಾಯಿಕವಾಗಿ ಅಡ್ಡೆಯಲ್ಲಿ ಇಟ್ಟುಕೊಂಡು ಸಾಗಿದರು. ದೇವಿಯ ಜೋಡಿ ತೊಟ್ಟಿಲುಗಳ ಮೆರವಣಿಗೆ ಬಸವಣ್ಣನ ಗುಡಿ, ರಥಬೀದಿ, ಹೊಸಬೀದಿ, ಬ್ರಹ್ಮೇಶ್ವರ ದೇಗುಲ, ಯೋಗಾನರಸಿಂಹಸ್ವಾಮಿ ಬೀದಿಯಲ್ಲಿ ಸಾಗಿತು.
ಮಹಿಳೆಯರು, ಯುವತಿಯರು, ಪುಟಾಣಿ ಮಕ್ಕಳು ಹೊಸ ಬಟ್ಟೆ ತೊಟ್ಟು ಮನೆಯ ಮುಂದೆ ರಂಗೋಲಿ ಬಿಡಿಸಿ ದೇವಿಯನ್ನು ಬರಮಾಡಿಕೊಂಡರು. ಪ್ರತಿ ಮನೆಗಳ ಮುಂದೆ ದೇವಿಗೆ ಬಾಗಿನ ಅರ್ಪಿಸಿ, ಹಣ್ಣು ಕಾಯಿ ನೀಡಿ ಕರ್ಪೂರದ ಆರತಿ ಬೆಳಗಿದರು.
ಮಹಿಳೆಯರು ಮನೆಮನೆಗೆ ತೆರಳಿ ಹಬ್ಬದ ಸಿಹಿಯನ್ನು ನೀಡಿ ಪರಸ್ಪರ ಶುಭಾಶಯ ಕೋರಿದರು. ಬಾಗಿನ ಅರ್ಪಿಸಿ, ಹಸಿರು ಬಳೆ ತೊಡಿಸಿ ಹಬ್ಬವನ್ನು ಸಂಭ್ರಮಿಸಿದರು. ಹಲವರು ಸುಮಂಗಲಿ ಪೂಜೆಯನ್ನು ನೆರವೇರಿಸಿದರು.
.