ಕೊಚ್ಚಿ: ಮದುವೆ ಹೆಸರಲ್ಲಿ ವಂಚಿಸಿದ್ದಲ್ಲದೆ ನಟಿ ಶಾಮ್ನಾ ಕಾಸಿಂಗೆ ಬೆದರಿಕೆಯೊಡ್ಡಿ ಹಣ ಕೀಳಲು ಯತ್ನಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಪೊಲೀಸ್ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಆರೋಪಿಗಳ ಗ್ಯಾಂಗ್ನಲ್ಲಿ 12 ಸದಸ್ಯರಿದ್ದು, ಈಗಾಗಲೇ 8 ಮಂದಿಯನ್ನು ಬಂಧಿಸಲಾಗಿದೆ. ಉಳಿದ 4 ಮಂದಿ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತರಾದ ವಿಜಯ್ ಸಖರೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೊಬೈಲ್ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಸ್ಟಾರ್ ನಟಿಗೆ ದೋಖಾ: ಸ್ವಲ್ಪದರಲ್ಲೇ ತಪ್ಪಿತು ಅನಾಹುತ!
ಗ್ಯಾಂಗ್ನ ಓರ್ವ ಆರೋಪಿ ನಟಿ ಶಾಮ್ನಾ ಕಾಸಿಂ ಮೊಬೈಲ್ ನಂಬರ್ ಪಡೆದು, ತಾನೋಬ್ಬ ಜ್ಯುವೆಲ್ಲರಿ ಶಾಪ್ ಮಾಲೀಕ ದುಬೈನಲ್ಲಿ ಸ್ವಂತ ಶಾಪ್ ಇದೆ ಎಂದು ನಂಬಿಸಿ, ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಪ್ರಸ್ತಾವನೆ ಮಾಡಿ ಕೊನೆಗೆ ಹಣ ಕೀಳಲು ಯತ್ನಿಸಿ ಇಡೀ ಗ್ಯಾಂಗ್ ಸಿಕ್ಕಿಬಿದ್ದಿದೆ.
ಇದೀಗ ವಿಚಾರಣೆ ವೇಳೆ ಆಘಾತಕಾರಿ ಮಾಹಿತಿಯೊಂದನ್ನು ಆರೋಪಿಗಳು ಬಹಿರಂಗಪಡಿಸಿದ್ದು, ಶಾಮ್ನಾ ಕಾಸಿಂರನ್ನು ಅಪಹರಿಸಿ, ಹೊಟೇಲ್ ಕೊಠಡಿಯೊಂದರಲ್ಲಿ ಒತ್ತೆಯಾಳಾಗಿರಿಸಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಇದು ಕಾರ್ಯರೂಪಕ್ಕೆ ಬರಲೇ ಇಲ್ಲ.
ಇದನ್ನೂ ಓದಿ: ಮದುವೆ ಹೆಸರಲ್ಲಿ ಶಾಮ್ನಾಗೆ ವಂಚನೆ ಪ್ರಕರಣ: ಶತ್ರು ಪಕ್ಕದಲ್ಲೇ ಇದ್ರೂ ನಟಿಗೆ ಗೊತ್ತಾಗಲಿಲ್ಲ!
ಗ್ಯಾಂಗ್ ಶಾಮ್ನಾ ಬಳಿ ಪ್ರಾರಂಭದಲ್ಲಿ 1 ಲಕ್ಷ ರೂ. ಮತ್ತು ನಂತರದಲ್ಲಿ 50 ಸಾವಿರ ರೂ. ಕೇಳಿದೆ. ಆದರೆ, ಕೊಡಲು ಒಪ್ಪದಿದ್ದಾಗ ಆಕೆಯನ್ನು ಕಿಡ್ನ್ಯಾಪ್ ಮಾಡಲು ಸಂಚು ರೂಪಿಸಿದ್ದಾರೆ. ಆರೋಪಿಗಳು ಈ ಹಿಂದೆ ಎಂಟು ಮಾಡೆಲ್ಗಳನ್ನು ಒತ್ತೆಯಾಳಾಗಿರಿಸಿಕೊಂಡು ಹಣ ದೋಚಿರುವ ಆರೋಪವು ಕೇಳಿಬಂದಿದೆ. ನಟಿ ಹಾಗೂ ಮಾಡೆಲ್ಗಳನ್ನು ಬೆದರಿಸಿ ಹಣ ಸುಲಿಗೆ ಮಾಡುವುದೇ ಇವರ ಕೆಲಸವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಮದುವೆಯಾಗುವುದಾಗಿ ನಂಬಿಸಿ ಸ್ಟಾರ್ ನಟಿಗೆ ವಂಚನೆ: ಬಂಧಿತ ಆರೋಪಿಗಳಿಂದ ಸ್ಪೋಟಕ ಮಾಹಿತಿ