ಬಂಕಾಪುರ: ಜಾತ್ರೆ, ಹೋರಿ ಹಬ್ಬಗಳಲ್ಲಿ ಬೈಕ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಕಳ್ಳರ ಗ್ಯಾಂಗ್ನ ಒಬ್ಬ ಅಪ್ರಾಪ್ತ ಸೇರಿ ಆರು ಜನರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 14 ಬೈಕ್ ಮತ್ತು ನೀರೆತ್ತುವ ಪಂಪ್ಸೆಟ್ ವಶಪಡಿಸಿಕೊಂಡಿದ್ದಾರೆ.
ಶಿಗ್ಗಾಂವಿ ತಾಲೂಕಿನ ಕಲ್ಯಾಣ ಗ್ರಾಮದ ವಿನಾಯಕ ಹನಮಂತಪ್ಪ ತಳವಾರ, ಕರಬಸಪ್ಪ ಶಿವಾಜಿ ಆರೇರ, ಆನಂದಗೌಡ ಮೊಟನಗೌಡ ಪಾಟೀಲ, ವಿಜಯಕುಮಾರ ದುರ್ಗಪ್ಪ ಹರಿಜನ, ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯ ಸಂದೀಪ ಸುರೇಶ ಜಾಡರ, ಮಧು ಶಿವಪುತ್ರಪ್ಪ ದೇವಿಹೊಸೂರ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಮುಖ ಆರೋಪಿ ಹನಮಂತಪ್ಪ ಶಿವಪ್ಪ ತಳವಾರ, ಚಂದ್ರಕಾಂತ ಶಿವಪುತ್ರಪ್ಪ ಬರದೂರ ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಎಲ್ಲ ಆರೋಪಿತರು ಜಿಲ್ಲೆಯ ವಿವಿಧೆಡೆ ನಡೆಯುವ ಜಾತ್ರೆ, ಹೋರಿ ಹಬ್ಬ, ಗಣೇಶ ವಿಸರ್ಜನೆ ಸಮಯದಲ್ಲಿ ಬೈಕ್ಗಳನ್ನು ಕದ್ದು ಅವುಗಳ ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಎಸ್ಪಿ ಅಂಶುಕುಮಾರ, ಎಎಸ್ಪಿ ಲಕ್ಷ್ಮಣ ಶಿರಕೋಳ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಕುಂಬಾರ, ಪಿಎಸ್ಐ ನಿಂಗಪ್ಪ ಕರಕಣ್ಣವರ ನೇತೃತ್ವದ ತಂಡ ಆರೋಪಿಗಳನ್ನು ಮಂಗಳವಾರ ಅವರ ಮನೆಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಿಎಸ್ಐ ಎಸ್.ಎಂ. ವನಹಳ್ಳಿ ಸಿಬ್ಬಂದಿ ಬಿ.ಎನ್. ಅಗಸಿಮನಿ, ಕೆ. ರಜನಿ, ಎ.ಕೆ. ನದಾಫ್, ಗೋವಿಂದ ಲಮಾಣಿ, ಪ್ರವೀಣ ಕೋಟಿಹಾಳ, ಜಬೀವುಲ್ಲಾ ದೊಡಮನಿ, ಕರಬಸಪ್ಪ ಹಾವಣಗಿ, ಬೀರಪ್ಪ ಕಳ್ಳಿಮನಿ, ಶಂಕರ ಗೊಂದಳಿ, ನಿಂಗಪ್ಪ ಪೂಜಾರ, ವಾಸು ಹೆಗಡೆ, ಷಣ್ಮುಖ ಲಮಾಣಿ, ಸತೀಶ ಮಾರಕಟ್ಟಿ, ಮಾರುತಿ ಹಾಲಬಾವಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಎಸ್.ಪಿ ಅಂಶುಕುಮಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.