ಉಡುಪಿ ಜಿಲ್ಲೆಯಲ್ಲಿ ಚತುರ್ಥಿ ಸಂಭ್ರಮ | ಮನೆ-ಮನಗಳಲ್ಲಿ ಗಜಾನನ ಸಮಾಗಮ
ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲಾದ್ಯಂತ ಹಿಂದು ಧರ್ಮೀಯರು ಭಾದ್ರಪದ ಶುಕ್ಲ ಚತುರ್ಥಿಯಂದು ಅತ್ಯಂತ ಸಡಗರ ಸಂಭ್ರಮದಿಂದ ಗಣೇಶ ಹಬ್ಬ ಆಚರಿಸಿದರು. ಭಕ್ತರು ತಮ್ಮ ಮನೆಗಳಿಗೆ ಸಿದ್ಧಿವಿನಾಯಕನ ಪುಟ್ಟ ವಿಗ್ರಹಗಳನ್ನು ತಂದು ಕುಟುಂಬದವರೊಂದಿಗೆ ಸೇರಿ ಪೂಜಿಸಿದರು.

ಗಜಾನನನಿಗೆ ಪ್ರಿಯವಾದ ಮೋದಕ, ಚಕ್ಕುಲಿ, ಅತ್ರಾಸ, ವಿವಿಧ ಬಗೆಯ ಲಡ್ಡು ಹಾಗೂ ಪಂಚಕಜ್ಜಾಯಗಳನ್ನು ತಯಾರಿಸಿ, ನೈವೇದ್ಯ ಮಾಡಿದರು. ಸಂಜೆಯ ವೇಳೆ ಗಣೇಶನ ವಿಗ್ರಹವನ್ನು ವಿಸರ್ಜಿಸಿದರು.

ವಿಶೇಷ ಪೂಜೆ, ಹೋಮ-ಹವನ
ಜಿಲ್ಲೆಯ ಗಣಪತಿಯ ದೇಗುಲಗಳಲ್ಲಿಯೂ ಸಹ ಚತುರ್ಥಿ ನಿಮಿತ್ತ ಶನಿವಾರ ವಿಶೇಷ ಪೂಜೆ, ಹೋಮ-ಹವನ ನಡೆದವು. ಅಲ್ಲದೆ, ನೂರಾರು ಗಣೇಶೋತ್ಸವ ಸಮಿತಿಗಳು ಮಣ್ಣಿನಿಂದ ತಯಾರಿಸಿದ್ದ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಜ್ರಂಭಣೆಯಿಂದ ವಾರ್ಷಿಕೋತ್ಸವ ಆಚರಿಸಿದವು. ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಸಿದ್ಧಿವಿನಾಯಕ ದೇಗುಲ, ಗುಡ್ಡಟ್ಟು ವಿನಾಯಕ ದೇವಸ್ಥಾನ, ಕುಂಭಾಶಿಯ ಆನೆಗುಡ್ಡೆ ಶ್ರೀವಿನಾಯಕ, ಉಡುಪಿಯ ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ, ಉಡುಪಿಯ ಅನಂತೇಶ್ವರ ದೇಗುಲದಲ್ಲಿರುವ ಗಣೇಶನ ಸನ್ನಿಧಿ, ಮಣಿಪಾಲದ ಹುಡ್ಕೋ ಕಾಲನಿಯಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಸೇರಿದಂತೆ ಗಣೇಶನ ವಿವಿಧ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೊಲೀಸ್ ಭದ್ರತೆ
ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪ್ರಮುಖ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರತಿಷ್ಠಾಪಿಸುವ ಗಣೇಶನ ಸನ್ನಿಧಿಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗಿತ್ತು.
ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ
ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇಗುಲ, ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸೇರಿದಂತೆ ಜಿಲ್ಲೆಯ ವಿವಿಧ ಸಾರ್ವಜನಿಕ ಸಮಿತಿಗಳಲ್ಲಿ ಮನರಂಜನಾ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರೂ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿದರು. ವಿವಿಧೆಡೆ ಚಿಣ್ಣರಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತಲ್ಲದೆ, ಅವುಗಳನ್ನು ಸಾರ್ವಜನಿಕ ವೀಕ್ಷಣೆಗೂ ಇಡಲಾಗಿತ್ತು.

ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇಗುಲದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶನನ್ನು ಪ್ರತಿಷ್ಠಾಪಿಸುತ್ತಿರುವುದು.
.