More

    ಗುಣಸಂಪನ್ನರಾಗಿ ಗಣನಾಯಕನನ್ನು ಪೂಜಿಸಿ

    ನಾಡಿನಾದ್ಯಂತ ಗಣಪತಿ ಹಬ್ಬದ ಸಂಭ್ರಮ ಮನೆಮಾಡಿದೆ. ಗಣಪತಿಯನ್ನು ಪೂಜಿಸುವ ಮುನ್ನ ಎಲ್ಲರೂ ಗುಣಪತಿಗಳಾಗಬೇಕು. ಗಣಪತಿಯ ಎಲ್ಲ ಅಂಗಾಂಗಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಗಣಪತಿಯು ಅತ್ಯುತ್ತಮ ಗುಣಪತಿ ಎಂಬುದು ಮನವರಿಕೆಯಾಗುತ್ತದೆ. ಅಂತಹ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುವ ಪರ್ವಕಾಲವೇ ಗಣೇಶ ಚೌತಿ ಹಬ್ಬ.

    ಸಕಾಲಿಕೆಯಾವುದೇ ಧಾರ್ವಿುಕ ಕಾರ್ಯದ ಪ್ರಾರಂಭದಲ್ಲಿ ಗಣಪತಿಯ ಪೂಜೆಯನ್ನೆ ಮಾಡುವುದು ಹಿಂದುಗಳ ಪದ್ಧತಿ. ಗಣಪತಿಯು ವಿಘ್ನನಿವಾರಕನಾಗಿರುವುದರಿಂದ ಆತನ ಒಲುಮೆ ಪಡೆಯಲು ಎಲ್ಲರೂ ಹಂಬಲಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಭಾದ್ರಪದ ಚೌತಿ ಬಂದರೆ ಸಾಕು ಎಲ್ಲರೂ ಎಲ್ಲೆಡೆಯಲ್ಲೂ ತಮ್ಮ ತಮ್ಮ ಶಕ್ತಿ ಮತ್ತು ಭಕ್ತಿಗೆ ಅನುಸಾರವಾಗಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ, ಉತ್ಸವಾದಿಗಳನ್ನು ನೆರವೇರಿಸುತ್ತಾರೆ.

    ‘ನಾ ರುದ್ರೋ ರುದ್ರಮರ್ಚಯೇತ್’ ಎಂಬ ಉಕ್ತಿಗನುಸಾರವಾಗಿ ದೇವರಾಗದೇ ದೇವರನ್ನು ಪೂಜಿಸಲು ಸಾಧ್ಯವಿಲ್ಲ ಎಂಬುದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಅಂತೆಯೇ ಗಣಪತಿಯನ್ನು ಪೂಜೆ ಮಾಡಬೇಕಾದರೆ ಮೊದಲು ನಾವೂ ಗಣಪತಿಯಾಗಬೇಕು! ಗಣಪತಿಯಾಗುವುದೆಂದರೆ ಅವನ ಆಕಾರದಂತೆ ನಮ್ಮ ಆಕಾರವನ್ನು ಮಾಡಿಕೊಳ್ಳುವುದಲ್ಲ, ಬದಲಾಗಿ ಅವನ ಆಕಾರದಲ್ಲಿನ ಅವಯವಗಳು ಸಂಕೇತಿಸುವ ಸದ್ಗುಣಗಳನ್ನು ಅಳವಡಿಸಿಕೊಂಡು ಗುಣಪತಿಗಳಾಗಬೇಕು. ಯಾವುದೇ ದೇವರನ್ನು ಪೂಜಿಸುವಾಗ ನಮ್ಮ ಮನಸ್ಸು, ಬುದ್ಧಿ, ಗುಣ, ನಡವಳಿಕೆಗಳು ಶುದ್ಧವಾಗಿರಬೇಕು. ಆಗ ಭಗವಂತನ ಒಲುಮೆ ಪಡೆಯುವುದು ಸರಳವಾಗುತ್ತದೆ.

    ಗಣಪತಿಯು ಮೂಷಕ ವಾಹನ. ಇಲಿಯು ಮನಸ್ಸಿನ ಸಂಕೇತ. ಇಲಿಯು ಕಂಡದ್ದನ್ನೆಲ್ಲ ತಿಂದುಬಿಡುವ ಸ್ವಭಾವ ಹೊಂದಿರುವಂತೆ ನಮ್ಮ ಮನಸ್ಸು ಕೂಡ ಪಂಚೇಂದ್ರಿಯಗಳ ಮೂಲಕ ಕಾಣುವ ಎಲ್ಲ ವಿಷಯಗಳನ್ನು ಆಸ್ವಾದಿಸಲು ಹಾತೊರೆಯುತ್ತದೆ. ಗಣಪತಿಯು ಇಲಿಯನ್ನು ವಾಹನ ಮಾಡಿಕೊಂಡು ತನ್ನ ನಿಯಂತ್ರಣದಲ್ಲಿರಿಸಿಕೊಂಡಂತೆ ನಾವು ನಮ್ಮ ಮನಸ್ಸನ್ನು ಸ್ವಾಧೀನದಲ್ಲಿ ಇರಿಸಿಕೊಳ್ಳಬೇಕು.

    ಗಣಪತಿಯು ಲಂಬೋದರ. ಅವನ ಹೊಟ್ಟೆ ವಿಶಾಲವಾಗಿದೆ. ವಿಶಾಲ ಉದರವು ಉದಾರತೆಯ ಸಂಕೇತ. ಅಂತೆಯೇ ಯಾರಾದರೂ ತಪ್ಪು ಮಾಡಿದರೆ ಏನೋ ತಿಳಿಯದೆ ತಪ್ಪಾಗಿದೆ. ನೀವೇ ದೊಡ್ಡ ಮನಸ್ಸು ಮಾಡಿ ಹೊಟ್ಟೆಯಲ್ಲಿ ಹಾಕಿಕೊಂಡು ಮನ್ನಿಸಿ ಎಂದು ವಿನಂತಿಸುತ್ತಾರಲ್ಲಾ ಹಾಗೆ ಇತರರ ತಪ್ಪುಗಳನ್ನು ಕ್ಷಮಿಸುವ ಉದಾರ ಗುಣವನ್ನು ಅಳವಡಿಸಿಕೊಂಡಾಗ ನಾವು ಗಣಪತಿಯ ಉದರವನ್ನು ಹೊಂದಿದಂತೆ.

    ಗಣಪತಿಯ ಹೊಟ್ಟೆಯ ಒಳಗೆ ಮೋದಕಗಳಿದ್ದರೆ, ಮೇಲೆ ಹಾವು ಸುತ್ತಿಕೊಂಡಿದೆ. ಇದು ಸಿಹಿಕಹಿಗಳ ದ್ವಂದ್ವದ ಪ್ರತೀಕ. ವಿಷಸರ್ಪವನ್ನು ಹೊಟ್ಟೆಗೆ ಸುತ್ತಿಕೊಂಡಿದ್ದರೂ ಹೊಟ್ಟೆಯೊಳಗೆ ಅಮೃತ ಸಮಾನವಾದ ಸಿಹಿ ಮೋದಕಗಳಿವೆ. ಇದರರ್ಥ ಹೊರಗಡೆ ಎಷ್ಟೇ ವಿಷಮಯ ವಾತಾವರಣವಿದ್ದರೂ ನಮ್ಮೊಳಗಿನ ಮನಸ್ಸನ್ನು ಮಾತ್ರ ಯಾವಾಗಲೂ ಮಧುರವಾಗಿರಿಸಿಕೊಂಡಿರಬೇಕು ಎಂಬುದಾಗಿದೆ.

    ಗಣಪತಿಗೆ ನಾಲ್ಕು ಭುಜಗಳು. ಇವು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳ ಸಂಪಾದನೆಯ ಸಂಕೇತಗಳು. ನಿರಂತರವಾದ ನಿಷ್ಠೆ ಮತ್ತು ಸಾಧನೆಯ ಮೂಲಕ ನಾಲ್ಕು ಪುರುಷಾರ್ಥಗಳನ್ನು ಸಂಪಾದಿಸಿಕೊಂಡಾಗ ನಾವು ಗಣಪತಿಯಂತೆ ನಾಲ್ಕು ಭುಜಗಳುಳ್ಳವರಾಗುತ್ತೇವೆ.

    ಗಣಪತಿಯ ಕಣ್ಣುಗಳು ಅತ್ಯಂತ ಚಿಕ್ಕವು. ಇದು ಸೂಕ್ಷ್ಮ ದೃಷ್ಟಿಯ ಸಂಕೇತ. ಅಣೋರಣೀಯಾನ್ ಮಹತೋ ಮಹೀಯಾನ್ ಎಂಬ ವೇದೋಕ್ತಿಯಂತೆ ಸೂಕ್ಷ್ಮಕ್ಕಿಂತ ಸೂಕ್ಷ್ಮನಾದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಗಣಪತಿಯಂತೆ ನಮ್ಮ ದೃಷ್ಟಿಯನ್ನು ಮತ್ತು ದೃಷ್ಟಿಕೋನವನ್ನು ಸೂಕ್ಷ್ಮಗೊಳಿಸಿಕೊಳ್ಳಬೇಕು.

    ಗಣಪತಿಯ ಕಿವಿಗಳು ಕೇರುವ ಮರದಂತಿವೆ. ಕಾಳು-ಕಡಿಗಳನ್ನು, ದವಸ-ಧಾನ್ಯಾದಿಗಳನ್ನು ಸ್ವಚ್ಛಗೊಳಿಸಲು ಚಾಣಿಗೆ ಮತ್ತು ಕೇರುವ ಮರ ಈ ಎರಡು ವಸ್ತುಗಳನ್ನು ಉಪಯೋಗಿಸುತ್ತಾರೆ. ಇವೆರಡೂ ಕಾಳುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರೂ, ಇವುಗಳಲ್ಲಿ ಸೂಕ್ಷ್ಮ ವ್ಯತ್ಯಾಸವಿದೆ. ಚಾಣಿಗೆಯು ಬೇಡವಾದ ಕಸಕಡ್ಡಿಗಳನ್ನು ತನ್ನೊಳಗೆ ಇರಿಸಿಕೊಂಡು ಉತ್ತಮವಾದ ಕಾಳುಗಳನ್ನು ಕೆಳಗೆ ಬಿಡುತ್ತದೆ. ಆದರೆ ಕೇರುವ ಮರವು ಉಪಯುಕ್ತವಾದ ಕಾಳುಗಳನ್ನು ತನ್ನೊಳಗೆ ಇರಿಸಿಕೊಂಡು ಬೇಡವಾದ ಕಸಕಡ್ಡಿ ಹೊರಗೆ ಹಾಕುತ್ತದೆ. ಇದರಂತೆ ಉತ್ತಮ ಮಾತುಗಳನ್ನು ಕಿವಿಯಲ್ಲಿ ಇರಿಸಿಕೊಂಡು ನಿಂದೆ, ಚಾಡಿ ಮುಂತಾದ ಕೆಟ್ಟ ಮಾತುಗಳನ್ನು ಹೊರಹಾಕುವ ಮೂಲಕ ನಮ್ಮ ಕಿವಿಯನ್ನು ಗಣಪತಿಯ ಕಿವಿಯ ಹಾಗೆ ಅಂದರೆ ಕೇರುವ ಮರದಂತೆ ಮಾಡಿಕೊಳ್ಳಬೇಕು.

    ಹೀಗೆ ಮನೋನಿಯಂತ್ರಣ, ಉದಾರತೆ, ಕ್ಷಮಾಗುಣ, ಮನದ ಮಧುರತೆ, ಪುರುಷಾರ್ಥಗಳ ಸಂಪಾದನೆ, ಸೂಕ್ಷ್ಮದೃಷ್ಟಿ, ಉತ್ತಮ ಮಾತುಗಳ ಆಯ್ಕೆ ಮುಂತಾದ ಶ್ರೇಷ್ಠ ಗುಣಗಳನ್ನು ಅಳವಡಿಸಿಕೊಂಡು ಗುಣಪತಿಯಾಗಿ, ಆ ನಂತರ ಗಣಪತಿಯನ್ನು ಪೂಜಿಸಿದರೆ ಆತನ ಒಲುಮೆ ದೊರೆಯುವುದು ನಿಶ್ಚಿತ.

    ಸಮಾಜದ ಸಂಘಟನೆಗೆ ಸ್ಪೂರ್ತಿ: ಸಾಮಾನ್ಯವಾಗಿ ಎಲ್ಲ ಹಬ್ಬಗಳನ್ನು ವೈಯಕ್ತಿಕವಾಗಿ ಅವರವರ ಮನೆಗಳಲ್ಲಿ ಆಚರಿಸಿದರೆ; ಗಣಪತಿ ಹಬ್ಬವನ್ನು ಮಾತ್ರ ಸಾರ್ವಜನಿಕವಾಗಿ ಆಚರಿಸಲಾಗುತ್ತದೆ. ದೇಶಪ್ರೇಮಿ ಬಾಲಗಂಗಾಧರ ತಿಲಕರ ದೂರದೃಷ್ಟಿಯ ಪ್ರತೀಕವಾಗಿ ಗಣೇಶೋತ್ಸವಕ್ಕೆ ಸಾರ್ವತ್ರಿಕ ಮೆರಗು ಬಂದಿದೆ.

    ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಜನರನ್ನು ಸಂಘಟಿಸಲು ಗಣೇಶೋತ್ಸವ ಸಹಕಾರಿಯಾಗಿದ್ದು ಇತಿಹಾಸ. ಯಾವುದೇ ಧಾರ್ವಿುಕ ಉತ್ಸವಗಳಾದರೂ ಅವುಗಳಿಂದ ಸಮಾಜ ಸಂಘಟನೆಯಾಗುತ್ತದೆ. ಈ ಮೂಲ ಆಶಯಕ್ಕೆ ದಕ್ಕೆಯಾಗದಂತೆ ಶಾಂತಿಯುತವಾಗಿ ಗಣೇಶೋತ್ಸವ ಆಚರಿಸಬೇಕು.

    ಪರಿಸರ ಸ್ನೇಹಿ ಗಣೇಶನನ್ನೇ ಪೂಜಿಸಿ: ಗಣೇಶನ ಮೂರ್ತಿಯನ್ನು ಮಾಡುವ ಕುಂಬಾರ ಜನಾಂಗದವರು ಪಾರಂಪರಿಕವಾಗಿ ಶುದ್ಧ ಮಣ್ಣಿನಿಂದ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ದುಷ್ಪರಿಣಾಮವು ಗಣೇಶನ ಮೂರ್ತಿಯ ಮೇಲೂ ಬಿದ್ದಿರುವುದರಿಂದ ಕೆಮಿಕಲ್​ಯುುಕ್ತ ಬಣ್ಣ ಮತ್ತು ನೀರಿನಲ್ಲಿ ಕರಗದ ಪಿಓಪಿ ಮೂರ್ತಿಗಳ ಹಾವಳಿ ಹೆಚ್ಚಾಗಿದೆ. ದೇವರ ಮೂಲ ಸ್ವರೂಪವೇ ಪ್ರಕೃತಿ. ಪ್ರಕೃತಿಗೆ ಹಾನಿಯಾಗುವಂತಹ ಯಾವುದೇ ಪೂಜೆಗಳಿಗೂ ಫಲ ದೊರೆಯುವುದಿಲ್ಲ. ಆದ್ದರಿಂದ ಎಲ್ಲರೂ ಪರಿಸರ ಸ್ನೇಹಿ ಶುದ್ಧ ಮಣ್ಣಿನ ಗಣಪತಿಯನ್ನೇ ಪೂಜಿಸಬೇಕು.

    ಸ್ವರ್ಣಗೌರಿ ವ್ರತ ಮತ್ತು ವರಸಿದ್ದಿ ವಿನಾಯಕ ವ್ರತದ ಬಗ್ಗೆ ಮಾಹಿತಿ

    ಸೆ.18 ಸೋಮವಾರ ತೃತೀಯ ತಿಥಿ ಬೆಳಗ್ಗೆ 09: 56 ನಿಮಿಷಗಳವರೆಗೆ ಇದ್ದು, 09 : 56 ರ ನಂತರ ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ. ಇನ್ನು ಸೋಮವಾರ ಬೆಳಗ್ಗೆ ಸೂರ್ಯೋದಯದ ಸಮಯವು ಮೈಸೂರಿನಲ್ಲಿ 6 : 12. ಚಾಮರಾಜನಗರ 6 : 11., ಮಂಡ್ಯ 6 : 11., ಬೆಂಗಳೂರಿನಲ್ಲಿ 6 : 08 ಕ್ಕೆ ಆಗಲಿದ್ದು, ರಾಹುಕಾಲ 7 : 44 ರಿಂದ 9 : 15 ರ ವರೆಗೆ, ಯಮಗಂಡಕಾಲ 10 : 46 ರಿಂದ 12 : 17 ರ ವರೆಗೆ ಇರುತ್ತದೆ. ಹಾಗಾಗಿ ಸ್ವರ್ಣ ಗೌರಿ ವ್ರತ ಮಾಡುವವರು ಬೆಳಗ್ಗೆ: 6 : 15 ರಿಂದ 7 : 40 ರ ವರಗೆ ಅಥವಾ 9 : 16 ರಿಂದ 9 : 55 ರ ವರೆಗೆ ಮಾಡಬಹುದು. ವರಸಿದ್ದಿ ವಿನಾಯಕ ವ್ರತ ಮಾಡುವವರು ಬೆಳಗ್ಗೆ 10 : 00 ರಿಂದ 10 : 45 ರ ವರಗೆ ಅಥವಾ 12 : 20 ರ ಮೇಲೆ ಅಭಿಜಿನ್ ಲಗ್ನದಲ್ಲಿ ಮಾಡಬಹುದು.

    ಸೂಚನೆ: ಗೌರಿ ಮತ್ತು ಗಣಪತಿ ಹಬ್ಬ ಈ ವರ್ಷ ಒಂದೇ ದಿನ ಬಂದಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts