ತಡರಾತ್ರಿ ರಾಮನಗರ ಜಿಲ್ಲಾ ನ್ಯಾಯಾಧೀಶರ ಮುಂದೆ ಗಣೇಶ್‌ ಹಾಜರು

ರಾಮನಗರ: ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಗಣೇಶ್‌ ಪೊಲೀಸರ ಬಲೆಗೆ ಬಿದ್ದಿದ್ದು, ಗುಜರಾತ್‌ನಲ್ಲಿ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗಣೇಶ್‌ರನ್ನು ಬಂಧಿಸಲಾಗಿದೆ. ತಡರಾತ್ರಿ ವೇಳೆಗೆ ರಾಮನಗರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ರಾಮನಗರ ಎಸ್​ಪಿ ರಮೇಶ್ ಬಾನೋತ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ತಂಡ ನಿರಂತರವಾಗಿ ಹುಡುಕಾಟ ನಡೆಸಿತ್ತು. ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನ 2 ಗಂಟೆಗೆ ಅರೆಸ್ಟ್ ಮಾಡಲಾಗಿದೆ. 3 ದಿನಗಳ ಹಿಂದೆ ಪಿಎಸ್​ಐ, ಇಬ್ಬರು ಇನ್​ಸ್ಪೆಕ್ಟರ್ ಒಳಗೊಂಡ ತಂಡ ಗುಜರಾತ್‌ಗೆ ತೆರಳಿತ್ತು. ಗುಜರಾತ್ ಪೊಲೀಸರ ಸಹಕಾರದಿಂದ ಮೂರೂ ತಂಡಗಳು ಗಣೇಶ್ ಬಂಧಿಸುವಲ್ಲಿ ಯಶಸ್ವಿಯಾಗಿವೆ ಎಂದರು.

ಕಂಪ್ಲಿ ಗಣೇಶ್ ವಿಚಾರಣೆ ನಡೆಸಲಾಗುತ್ತಿದೆ. ಗಣೇಶ್ ಅವರು ನಮ್ಮ ತನಿಖೆಗೆ ಸಹಕರಿಸುತ್ತಿದ್ದಾರೆ. ಎಫ್‌ಐಆರ್ ಆದ ನಂತರ ಅವರನ್ನು ಬೇರೆ ಬೇರೆ ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದೆವು. ನಮ್ಮ ಮಾಹಿತಿ ಪ್ರಕಾರ ಸುಖ ಸಾಗರ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಮಾಹಿತಿ ಇತ್ತು. ಸೋಮನಾಥ ದೇವಸ್ಥಾನದಲ್ಲಿ ಓಡಾಟ ನಡೆಸಿದ್ದಾರೆ. ಗಣೇಶ್ ಜತೆ ಕರ್ನಾಟಕದ ಒಬ್ಬರು ಮತ್ತು ಬೇರೆ ರಾಜ್ಯದ ಒಬ್ಬರು ಸ್ನೇಹಿತರಿದ್ದರು ಎಂದು ತಿಳಿದಿತ್ತು. ನಾವು ಕೂಡ ಸಾಕ್ಷಿಗಳನ್ನು ವಿಚಾರಣೆ ಮಾಡುತ್ತೇವೆ. ವಿಮಾನ ಅಥವಾ ರಸ್ತೆ ಮೂಲಕ ಆರೋಪಿ ಮತ್ತು ಜತೆಗಿದ್ದವರನ್ನು ರಾಮನಗರಕ್ಕೆ ಕರೆತರಲಾಗುವುದು. ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರನ್ನೂ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)