ಮೂರ್ತಿ ತಯಾರಿಕೆ ಘಟಕ ಮೇಲೆ ದಾಳಿ

ತೇರದಾಳ: ಪಟ್ಟಣದ ದೇವರಾಜ ನಗರದ ಗಣೇಶ ಮೂರ್ತಿ ತಯಾರಿಸುವ ಅಲ್ಲಮಪ್ರಭು ಮಹಿಳಾ ಗುಡಿ ಕೈಗಾರಿಕೆ (ಪರಯ್ಯ ತೆಳಗಿನಮನಿ)ಘಟಕದ ಮೇಲೆ ಅಧಿಕಾರಿಗಳ ತಂಡ ನಾಲ್ಕೈದು ದಿನಗಳ ಹಿಂದೆ ದಾಳಿ ನಡೆಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ತೇರದಾಳ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ತಹಸೀಲ್ದಾರ್ ಕಚೇರಿ ಕಂದಾಯ ನಿರೀಕ್ಷಕ ಎಸ್.ಬಿ. ಮಾಯನ್ನವರ, ಗ್ರಾಮಲೆಕ್ಕಾಧಿಕಾರಿ ಮಠಪತಿ ಹಾಗೂ ಪುರಸಭೆ ಆರೋಗ್ಯ ನಿರೀಕ್ಷಕ ತುಕಾರಾಮ ಜಮಖಂಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸವೋಚ್ಚ ನ್ಯಾಯಾಲಯ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿ ಆದೇಶಿಸಿದ್ದರೂ ಪಟ್ಟಣದಲ್ಲಿ ಅನಧಿಕೃತವಾಗಿ ಗಣೇಶ ಮೂರ್ತಿ ತಯಾರಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ.

ದಾಳಿ ಸ್ಥಳದಲ್ಲಿ ಪಿಒಪಿ ಮೂರ್ತಿ ಸಿಕ್ಕಿದ್ದರೂ ಅವುಗಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಳ್ಳದೆ ಕೇವಲ ನೋಟಿಸ್ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ.

ಪಿಒಪಿ ಮೂರ್ತಿಗಳನ್ನು ಈ ಭಾಗದಲ್ಲಿ ಮಾರಾಟ ಮಾಡುತ್ತಿಲ್ಲ. ಬದಲಾಗಿ ಮಹಾರಾಷ್ಟ್ರಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಮೂರ್ತಿ ತಯಾರಕರು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಅಚ್ಚರಿ ಎಂದರೆ ಪಿಒಪಿ ಗಣೇಶ ಮೂರ್ತಿಗಳನ್ನು ಮಹಾರಾಷ್ಟ್ರ ರಾಜ್ಯದಿಂದಲೇ ತರಿಸಲಾಗುತ್ತದೆ. ಆದರೆ, ಮೂರ್ತಿ ತಯಾರಕರ ಹೇಳಿಕೆ ಅಧಿಕಾರಿಗಳನ್ನು ದಾರಿ ತಪ್ಪಿಸುವುದಾಗಿದೆ. ಅಧಿಕಾರಿಗಳು ವಾಪಸ್ ಹೋದ ಮೇಲೆ ಮೂರ್ತಿಗಳನ್ನು ಬೇರೆಡೆ ಸಾಗಿಸುವ ಕೆಲಸ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತೇರದಾಳ ದೇವರಾಜ ನಗರದ ಪರಯ್ಯ ತೆಳಗಿನಮನಿ ಅವರ ಮನೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಲು ತಂದಿಡಲಾಗಿದೆ ಎಂಬ ಮಾಹಿತಿ ಬಂದಿತ್ತು. ಕಂದಾಯ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿಯೊಂದಿಗೆ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಪಿಒಪಿ ಗಣೇಶ ಮೂರ್ತಿಗಳು ಕಂಡು ಬಂದಿದ್ದರಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

| ಮಹಾಂತೇಶ ಬೀಳಗಿ ತೇರದಾಳ ಪುರಸಭೆ ಮುಖ್ಯಾಧಿಕಾರಿ