ಗುಂಡ್ಲುಪೇಟೆ: ಶಾಸಕರಾಗಿ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಪಡಿಸುವಲ್ಲಿ ವಿಫಲವಾಗಿರುವ ಗಣೇಶ್ ಪ್ರಸಾದ್ ತಮ್ಮ ಜವಾಬ್ದಾರಿಯನ್ನು ಮರೆತು ಸಹಕಾರ ಕ್ಷೇತ್ರವನ್ನು ತಮ್ಮ ಕುಟುಂಬದ ಕಂಪನಿ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಟೀಕಿಸಿದರು.
ಮಾಜಿ ಸಚಿವ ದಿ.ಮಹದೇವಪ್ರಸಾದ್ ತಾವು ಬದುಕಿರುವವರೆಗೂ ತಮ್ಮ ಕುಟುಂಬದ ಯಾವುದೇ ಸದಸ್ಯರನ್ನು ರಾಜಕೀಯಕ್ಕೆ ತರದೆ ದೂರವಿಟ್ಟಿದ್ದರು. ಆದರೆ ಎರಡು ವರ್ಷಗಳ ಹಿಂದೆ ಶಾಸಕರಾಗಿ ಆಯ್ಕೆಯಾದ ಗಣೇಶ್ ಪ್ರಸಾದ್ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವ ಬದಲು ಅಧಿಕಾರ ದಾಹದಿಂದ ಎಂಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಸ್ಥಾನಕ್ಕೆ ತಾವೇ ಸ್ಪರ್ಧಿಸುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಗಣೇಶ್ ಅವರ ಚಿಕ್ಕಪ್ಪ ನಂಜುಂಡಪ್ರಸಾದ್ ಚಾಮುಲ್ ಮಾಜಿ ಅಧ್ಯಕ್ಷರಾಗಿದ್ದು ಹಾಲಿ ನಿರ್ದೇಶಕರಾಗಿದ್ದಾರೆ. ಜತೆಗೆ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರೂ ಆಗಿದ್ದಾರೆ. ಜತೆಗೆ ಸ್ವಗ್ರಾಮದ ಡೇರಿ ಹಾಗೂ ಸಹಕಾರ ಸಂಘಗಳಿಗೂ ಅಧ್ಯಕ್ಷರಾಗಿದ್ದು, ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೂ ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡುವ ಬಗ್ಗೆ ನಿರ್ಧರಿಸಿದ್ದಾರೆ. ಆ ಮೂಲಕ ಎಲ್ಲ ಅಧಿಕಾರವೂ ಕುಟುಂಬದ ಕಂಪನಿ ವಶದಲ್ಲಿ ಇಟ್ಟುಕೊಳ್ಳಲು ಹೊರಟಿದ್ದು, ಇವರು ಅಧಿಕಾರಕ್ಕೆ ಬರಲು ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇನ್ನು ಪಟ್ಟಣದಲ್ಲಿ ಇತ್ತೀಚೆಗೆ ಹಲ್ಲೆಗೊಳಗಾಗಿ ಮೃತಪಟ್ಟ ಯುವಕನ ಕುಟುಂಬಕ್ಕೆ ಪರಿಹಾರ ಕೊಡಿಸುವ ಬದಲು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮಾಜಿ ಮಂಡಲಾಧ್ಯಕ್ಷ ಎಲ್.ಸುರೇಶ್, ಪುರಸಭೆ ಸದಸ್ಯ ನಾಗೇಶ್, ಮಹದೇವಶೆಟ್ಟಿ, ಕಣ್ಣೇಗಾಲಸ್ವಾಮಿ, ಡಾ.ನವೀನ್ ಮೌರ್ಯ, ನಾಗೇಂದ್ರ, ಮಹೇಶ್, ಮಂಜುನಾಥ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.