ಗಿಮಿಕ್​ನಲ್ಲಿ ಹೆದರಿಸ್ತಾರೆ ಗಣೇಶ್

‘ಗೋಲ್ಡನ್ ಸ್ಟಾರ್’ ಗಣೇಶ್ ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಸಿನಿಮಾಗಳಲ್ಲಿಯೇ ಕಾಣಿಸಿಕೊಂಡಿದ್ದು ಹೆಚ್ಚು. ಅಲ್ಲೊಂದು ಇಲ್ಲೊಂದು ಎಂಬಂತೆ ಕೆಲವು ಮಾಸ್ ಚಿತ್ರಗಳಲ್ಲಿ ನಟಿಸಿದ್ದು ಬಿಟ್ಟರೆ, ಹಾರರ್ ರೀತಿಯ ಸಿನಿಮಾ ಅವರ ಖಾತೆಯಲ್ಲಿ ಸ್ಥಾನ ಪಡೆದಿರಲಿಲ್ಲ. ಈಗ ‘ಗಿಮಿಕ್’ ಮೂಲಕ ಅದನ್ನೂ ತಮ್ಮ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ.

ಪೋಸ್ಟರ್ ಮೂಲಕವೇ ಗಮನಸೆಳೆದಿದ್ದ ‘ಗಿಮಿಕ್’ ಭಾನುವಾರ (ಮೇ 19) ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಭೂತ-ಪ್ರೇತದ ಸಿನಿಮಾ ಆಗಿದ್ದರಿಂದ ಮಧ್ಯರಾತ್ರಿ 12.30ಕ್ಕೆ ಟ್ರೇಲರ್ ರಿಲೀಸ್ ಆಗಿದ್ದು ವಿಶೇಷ. ಅಂದಹಾಗೆ 2016ರಲ್ಲಿ ಕಾಲಿವುಡ್ ಹಾಸ್ಯ ನಟ ಸಂತಾನಮ್ ಅಭಿನಯಿಸಿದ್ದ ‘ದಿಲ್ಲುಕು ದುಡ್ಡು’ ಸಿನಿಮಾ ತೆರೆಕಂಡಿತ್ತು. ಬಾಕ್ಸ್ ಆಫೀಸ್​ನಲ್ಲೂ ಒಳ್ಳೆಯ ಕಮಾಯಿ ಮಾಡಿತ್ತು. ಆ ಚಿತ್ರವನ್ನೇ ಈಗ ಕನ್ನಡದಲ್ಲಿ ‘ಗಿಮಿಕ್’ ಹೆಸರಿನಲ್ಲಿ ರಿಮೇಕ್ ಮಾಡಲಾಗಿದೆ.

ಸದ್ಯ ಬಿಡುಗಡೆಯಾಗಿರುವ ಟ್ರೇಲರ್​ನಲ್ಲಿ ಭೂತದ ಹಾವಳಿಯ ಜತೆಗೆ ಕಾಮಿಡಿಯನ್ನೂ ತೋರಿಸಲಾಗಿದೆ.ಮೊದಲ ಬಾರಿ ಗಣೇಶ್​ಗೆ ಜೋಡಿಯಾಗುವ ಮೂಲಕ ರೋನಿಕಾ ಸಿಂಗ್ ಕನ್ನಡಕ್ಕೆ ಆಗಮಿಸಿದ್ದು, ಚಿ. ಗುರುದತ್, ರವಿಶಂಕರ್ ಗೌಡ, ಸಾಧುಕೋಕಿಲ, ಶೋಭರಾಜ್, ಸುಂದರ್ ರಾಜ್ ಸೇರಿ ಹಲವು ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಿಘ್ಞೇಶ್ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಟ್ರೇಲರ್ ಮೂಲಕ ಆಗಮಿಸಿರುವ ಚಿತ್ರತಂಡ, ಇನ್ನು ಕೆಲ ದಿನಗಳಲ್ಲಿ ಹಾಡುಗಳನ್ನು ಹೊತ್ತು ಬರಲಿದೆಯಂತೆ.