ಚಂದನವನಕ್ಕೆ ಮತ್ತೆ ರೀ ಎಂಟ್ರಿ ಕೊಡಲಿದ್ದಾರಾ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ?

ಸ್ಯಾಂಡಲ್‌ವುಡ್‌ ಕ್ವೀನ್‌ ಆಗಿ ನಂತರ ರಾಜಕಾರಣಿಯಾಗಿ ದೆಹಲಿ ಸೇರಿದ್ದ ನಟಿ ರಮ್ಯಾ ಇದೀಗ ಮತ್ತೆ ಸ್ಯಾಂಡಲ್‌ವುಡ್‌ ಕಡೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಮದಕರಿ ನಾಯಕನ ಚಿತ್ರದಲ್ಲಿ ರಮ್ಯಾ ನಟಿಸುತ್ತಿದ್ದು, ಮತ್ತೆ ಚಂದನವನದತ್ತ ಬರುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ.

ಚಿತ್ರದುರ್ಗವನ್ನಾಳಿದ ಮದಕರಿ ನಾಯಕನ ಕುರಿತ ಒಂದೇ ಕತೆಗೆ ಈಗಾಗಲೇ ದರ್ಶನ್ ಹಾಗೂ ಸುದೀಪ್ ಬೇರೆ ಬೇರೆ ಚಿತ್ರದಲ್ಲಿ ನಟಿಸುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಗಂಡುಗಲಿ ಮದಕರಿ ನಾಯಕನ ಚಿತ್ರಕ್ಕೆ ರಮ್ಯಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ 2006 ರಲ್ಲಿ ತೆರೆಕಂಡಿದ್ದ ‘ದತ್ತ’ ಚಿತ್ರದಲ್ಲಿ ದರ್ಶನ್ ಮತ್ತು ರಮ್ಯಾ ಜತೆಯಾಗಿ ನಟಿಸಿದ್ದರು. ಆದಾದ ಬಳಿಕ 12 ವರ್ಷಗಳ ನಂತರ ರಮ್ಯಾ ಮತ್ತೆ ದರ್ಶನ್‌ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕೊನೆಯ ಬಾರಿಗೆ ‘ಕಠಾರಿ ವೀರ ಸುರಸುಂದರಾಂಗಿ’ ‘ಆರ್ಯನ್‌’, ‘ನಾಗರಹಾವು’ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಪ್ರಜ್ವಲ್ ದೇವರಾಜ್‌ ಅಭಿನಯದ ‘ದಿಲ್ ಕಾ ರಾಜ’ ಸಿನಿಮಾ ಅರ್ಧಕ್ಕೆ ನಿಂತಿದೆ.

ಗಂಡುಗಲಿ ಮದಕರಿ ನಾಯಕ ಸಿನಿಮಾವನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.