ಕೇಳುವವರಿಲ್ಲ ಕಟ್ಟಡಗಳ ಗೋಳು

>

ಬಿ. ರಾಘವೇಂದ್ರ ಪೈ, ಗಂಗೊಳ್ಳಿ
ಇಲ್ಲಿನ ಮ್ಯಾಂಗನೀಸ್ ವಾರ್ಫ್ ಬಳಿ ಇರುವ ಬಂದರು ಇಲಾಖೆ ಕಟ್ಟಡ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಶಿಥಿಲಾವಸ್ಥೆ ತಲುಪಿದೆ.
ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ಮೀನುಗಾರರ ಉಪಯೋಗಕ್ಕಾಗಿ ನಿರ್ಮಿಸಲಾಗಿರುವ ಶೆಡ್‌ಗಳು ನಿರ್ವಹಣೆ ಕೊರತೆಯಿಂದ ಸಂಪೂರ್ಣ ಪಾಳು ಬಿದ್ದಿವೆ. ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು ಭೂತ ಬಂಗಲೆಯಂತಾಗಿದೆ. ಪರಿಸರದಲ್ಲಿ ಹಾವು ಮತ್ತಿತರ ವಿಷ ಜಂತುಗಳ ಹಾವಳಿ ಕಾಣಿಸಿಕೊಂಡಿದೆ. ಸಂಜೆ ಬಳಿಕ ಸೊಳ್ಳೆ ಕಾಟ ಹೆಚ್ಚಾಗಿದ್ದು, ಗಿಡಮರಗಳನ್ನು ಕಡಿಯುವಂತೆ ಬಂದರು ಇಲಾಖೆ ಅಧಿಕಾರಿಗಳನ್ನು ವಿನಂತಿಸಿಕೊಂಡಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕಟ್ಟಡದ ಮೇಲ್ಛಾವಣಿ ಕೂಡ ಕುಸಿಯುವ ಹಂತಕ್ಕೆ ತಲುಪಿದೆ. ಎರಡು ಶಟರ್ ಹೊರತುಪಡಿಸಿದರೆ ಇನ್ನುಳಿದ ಕಿಟಿಕಿ ಬಾಗಿಲುಗಳು ಸಂಪೂರ್ಣ ಹಾಳಾಗಿವೆ.

ಅಪರೂಪಕ್ಕೆ ಬಳಕೆ: ಸದ್ರಿ ಕಟ್ಟಡವನ್ನು ಬಾಡಿಗೆಗೆ ಪಡೆದ ಮೀನುಗಾರರು ಅಪರೂಪಕ್ಕೊಮ್ಮೆ ಉಪಯೋಗಿಸುತ್ತಿರುವುದು ಕಟ್ಟಡ ಈ ಹಂತಕ್ಕೆ ತಲುಪಲು ಇನ್ನೊಂದು ಕಾರಣ ಎನ್ನಲಾಗಿದೆ. ಕಟ್ಟಡಗಳಲ್ಲಿ ಮೀನುಗಾರರು ಬಲೆ ಮತ್ತಿತರ ಸಲಕರಣೆಗಳನ್ನು ಶೇಖರಿಸಿಟ್ಟಿದ್ದು ತಮಗೆ ಅಗತ್ಯ ಬಿದ್ದಾಗ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕಟ್ಟಡದ ಬಾಗಿಲು, ಕಿಟಕಿಗಳು ಸಂಪೂರ್ಣ ಹಾಳಾಗಿವೆ. ದುರಸ್ತಿ ಮಾಡಲು ಇಲಾಖಾಧಿಕಾರಿಗಳು ಹಿಂದೆ ಮುಂದೆ ನೋಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

ಅನುದಾನ ಕೊರತೆ:  ಬಂದರು ಇಲಾಖೆ ವ್ಯಾಪ್ತಿಗೆ ಬರುವ ಈ ಕಟ್ಟಡಗಳನ್ನು ಬಾಡಿಗೆಗೆ ನೀಡಲಾಗುತ್ತಿದ್ದು, ಕಟ್ಟಡ ರಿಪೇರಿ ಸಹಿತ ಇನ್ನಿತರ ನಿರ್ವಹಣೆ ಜವಾಬ್ದಾರಿ ಇಲಾಖೆಯದ್ದು. ಆದರೆ, ಕಟ್ಟಡಗಳನ್ನು ನಿರ್ವಹಣೆ ಮಾಡಲು ಇಲಾಖೆಯಿಂದ ಅನುದಾನ ದೊರೆಯುತ್ತಿಲ್ಲ. ಹೀಗಾಗಿ ಕಟ್ಟಡ ದುರಸ್ತಿಗೊಳಿಸಲು ಇಲಾಖೆ ಸ್ಥಳೀಯ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಟ್ಟಡ ನಿರ್ವಹಣೆಯ ಅನುದಾನ ಸ್ಥಗಿತಗೊಂಡಿರುವುದರಿಂದ ಕಟ್ಟಡಗಳು ಈ ಸ್ಥಿತಿಗೆ ತಲುಪಲು ಪ್ರಮುಖ ಕಾರಣ.

ಸ್ಥಳೀಯರ ಆಕ್ರೋಶ
ಸರ್ಕಾರದ ವಿವಿಧ ಇಲಾಖೆಗಳಿಗೆ ಕಟ್ಟಡ ಇಲ್ಲದೆ ಕಷ್ಟಪಡುತ್ತಿರುವ ಈ ದಿನಗಳಲ್ಲಿ ಗಂಗೊಳ್ಳಿ ಬಂದರು ಇಲಾಖೆಗೆ ಸೇರಿದ ಕಟ್ಟಡಗಳು ಉಪಯೋಗಕ್ಕಿಲ್ಲದೆ ಪಾಳು ಬೀಳುತ್ತಿವೆ. ಇಲಾಖೆ ಅಧಿಕಾರಿಗಳು ಕಟ್ಟಡವನ್ನು ಸಮರ್ಪಕವಾಗಿ ಉಪಯೋಗಿಸಲು ಮತ್ತು ಕಟ್ಟಡವನ್ನು ನಿರ್ವಹಣೆ ಮಾಡಲು ವಿಫಲರಾಗುರುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇರುವ ಗಟ್ಟಿಮುಟ್ಟಾದ ಕಟ್ಟಡ ಸರಿಯಾಗಿ ನಿರ್ವಹಣೆ ಮಾಡಲು ಇಲಾಖೆ ಅನುದಾನ ಒದಗಿಸಬೇಕು. ಕಟ್ಟಡದ ಸದುಪಯೋಗ ಮೀನುಗಾರರಿಗೆ ಮತ್ತು ಸ್ಥಳೀಯರಿಗೆ ದೊರೆಯುವಂತಾಗಲು ಅಧಿಕಾರಿಗಳು ಯೋಜನೆ ರೂಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.