ಪ್ರಧಾನಿ ಒತ್ತಡಕ್ಕೆ ಮಣಿದು ಪರಿಕ್ಕರ್​ ಪತ್ರ ಬರೆದಿದ್ದಾರೆ: ರಾಹುಲ್​ ಗಾಂಧಿ

ನವದೆಹಲಿ: ನಾವು ಭೇಟಿಯಾದ ಸಂದರ್ಭದಲ್ಲಿ ಚರ್ಚಿಸಿದ ವಿಷಯಗಳನ್ನು ನಾನು ಎಲ್ಲಿಯೂ ಬಹಿರಂಗಗೊಳಿಸಿಲ್ಲ, ಈಗಾಗಲೇ ಸಾರ್ವಜನಿಕರಿಗೆ ತಿಳಿದಿರುವ ವಿಷಯವನ್ನೇ ನಾನು ಭಾಷಣದಲ್ಲಿ ಪ್ರಸ್ತಾಪಿಸಿದ್ದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಪತ್ರಕ್ಕೆ ಎಐಸಿಸಿ ಅಧಕ್ಷ ರಾಹುಲ್​ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್​ ಗಾಂಧಿ ಮಂಗಳವಾರ ನನ್ನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಈ ಸಂದರ್ಭದಲ್ಲಿ ನಾವು ರಫೇಲ್​ ಒಪ್ಪಂದದ ಕುರಿತು ಚರ್ಚೆ ನಡೆಸಿದ್ದೇವೆ ಎಂದು ರಾಹುಲ್​ ತಮ್ಮ ಭಾಷಣದಲ್ಲಿ ತಿಳಿಸಿದ್ದರು. ಇದನ್ನು ಖಂಡಿಸಿ ಪರಿಕ್ಕರ್​ ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.

ಪರಿಕ್ಕರ್​ ಪತ್ರಕ್ಕೆ ಪ್ರತಿಕ್ರಿಯಿಸಿರುವ ರಾಹುಲ್​ ಗಾಂಧಿ, ‘ಪರಿಕ್ಕರ್​ ಜೀ, ನಮ್ಮ ಭೇಟಿಯ ನಂತರ ನಿಮ್ಮ ಮೇಲೆ ಬಂದಿರುವ ಒತ್ತಡದ ಕುರಿತು ನನಗೆ ತಿಳಿದಿದೆ. ಆ ಒತ್ತಡಕ್ಕೆ ಮಣಿದು ನೀವು ಪ್ರಧಾನ ಮಂತ್ರಿಗಳಿಗೆ ನಿಷ್ಠೆಯನ್ನು ತೋರಲು ಪತ್ರ ಬರೆದಿದ್ದೀರಿ. ಪತ್ರದಲ್ಲಿ ನನ್ನ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದೀರಿ.

ನಿಮ್ಮನ್ನು ಭೇಟಿ ಮಾಡಿದ ನಂತರ 2 ಸಮಾರಂಭಗಳಲ್ಲಿ ಭಾಷಣ ಮಾಡಿದ್ದೇನೆ. ಇಲ್ಲಿ ನಾನು ಈ ಮೊದಲೇ ತಿಳಿಸಿದ್ದ ವಿಷಯಗಳು ಮತ್ತು ಈಗಾಗಲೇ ಸಾರ್ವಜನಿಕವಾಗಿರುವ ವಿಷಯಗಳನ್ನು ಮಾತ್ರ ಪ್ರಸ್ತಾಪಿಸಿದ್ದೇನೆ ಎಂದು ರಾಹುಲ್​ ತಿಳಿಸಿದ್ದಾರೆ. (ಏಜೆನ್ಸೀಸ್​)