More

    ಅಸ್ತಿತ್ವ ಕಳಕೊಂಡ ಗಾಂಧಿ ಪಾರ್ಕ್

    ಭರತ್ ಶೆಟ್ಟಿಗಾರ್ ಮಂಗಳೂರು
    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೊಡ್ಡ ಪಾರ್ಕ್‌ಗಳಲ್ಲಿ ಒಂದಾಗಿರುವ ಕುದ್ಮುಲ್ ರಂಗರಾವ್ ಪುರಭವನ ಬಳಿಯ ಗಾಂಧಿ ಪಾರ್ಕ್ ಈಗ ಅಸ್ತಿತ್ವ ಕಳೆದುಕೊಂಡು ಧ್ವಂಸಗೊಂಡಿದೆ.

    ಕ್ಲಾಕ್ ಟವರ್‌ನಿಂದ ಎ.ಬಿ.ಶೆಟ್ಟಿ ವೃತ್ತದ ಕಡೆಗೆ ಸಾಗುವ ರಸ್ತೆಯ ಅಡಿಯಲ್ಲಿ ಪಾರ್ಕ್‌ಗೆ ಹೊಂದಿಕೊಂಡಂತೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪಾರ್ಕ್‌ನ ಪಾರ್ಶ್ವದಲ್ಲಿ ಈ ಅಂಡರ್‌ಪಾಸ್ ಸಾಗುವುದರಿಂದ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಪಾರ್ಕ್ ಒಳಭಾಗದಲ್ಲಿ ಸಾಕಷ್ಟು ಸಾಮಗ್ರಿಗಳನ್ನು ಶೇಖರಿಸಿಟ್ಟಿದೆ. ದಿನನಿತ್ಯ ಟಿಪ್ಪರ್‌ಗಳ ಓಡಾಟ ನಡೆಯುತ್ತಿದ್ದು, ಜಲ್ಲಿ, ಮರಳು ಇಲ್ಲೇ ರಾಶಿ ಹಾಕಲಾಗಿದೆ. ಪಾರ್ಕ್ ಆವರಣ ಗೋಡೆ ಸುತ್ತಲೂ ತಗಡು ಶೀಟ್ ಅಳವಡಿಸಲಾಗಿದ್ದು, ಪಾರ್ಕ್‌ನಲ್ಲಿ ಕಾರ್ಮಿಕರಿಗಾಗಿ ತಾತ್ಕಾಲಿಕ ಶೆಡ್, ಕಟ್ಟಡ ನಿರ್ಮಿಸಲಾಗಿದೆ. ಮರಗಳನ್ನು ಹೊರತುಪಡಿಸಿ ಪಾರ್ಕ್‌ನಲ್ಲಿದ್ದ ಶೇ.90ರಷ್ಟು ಹೂವಿನ ಗಿಡಗಳು ಕಾಮಗಾರಿ ಹಿನ್ನೆಲೆಯಲ್ಲಿ ನಾಶವಾಗಿವೆ.

    ಬಣ್ಣ ಬದಲಿಸಿದ ಗಾಂಧಿ
    ಕೆಲಸ ಸಾಗುತ್ತಿರುವ ಕಾರಣ ಇಲ್ಲಿ ಧೂಳಿನಿಂದಾಗಿ ಪಾರ್ಕ್ ಒಳಗಡೆ ಇರುವ ಮಹಾತ್ಮ ಗಾಂಧಿ ಪ್ರತಿಮೆಯ ಬಣ್ಣವೇ ಬದಲಾಗಿದೆ. ಬೆಳ್ಳಿಯ ಬಣ್ಣದ ಪ್ರತಿಮೆ ಧೂಳಿನಿಂದಾಗಿ ಕೆಂಪು ಬಣ್ಣಕ್ಕೆ ತಿರುಗಿದೆ. ಇಲ್ಲಿಯವರೆಗೆ ಯಾವುದೇ ಸಂಘ ಸಂಸ್ಥೆಗಳ ಅರಿವಿಗೆ ಇದು ಬಂದಂತಿಲ್ಲ. ಕಾರ್ಮಿಕರೂ ತಮ್ಮ ಬಟ್ಟೆಬರೆಗಳನ್ನು ಗಾಂಧಿ ಪ್ರತಿಮೆ ಮುಂಭಾಗದ ಕಬ್ಬಿಣದ ಸರಳುಗಳಲ್ಲಿ ಒಣಗಿಸುತ್ತಿದ್ದಾರೆ. ಕಾಮಗಾರಿ ನಡೆಯುತ್ತಿರುವುರಿಂದ ಸದ್ಯದ ಮಟ್ಟಿಗೆ ಅಲ್ಲಿಂದ ತೆಗೆದು ಬೇರೆಡೆ ಪ್ರತಿಷ್ಠಾಪಿಸುವುದು ಉತ್ತಮ.

    ಪಾರ್ಕ್ ಬಿಟ್ಟ ಹಿರಿಯ ನಾಗರಿಕರು
    ಪಾರ್ಕ್ ಹಿರಿಯ ನಾಗರಿಕರಿಗೆ ಮೆಚ್ಚಿನ ತಾಣವಾಗಿತ್ತು. ಸಾಯಂಕಾಲ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಇಲ್ಲಿ ಸೇರಿ ತಮ್ಮ ಕಷ್ಟ ಸುಖಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೆ ಅವರೆಲ್ಲ ಈಗ ತಾವು ಕುಳಿತುಕೊಳ್ಳುತ್ತಿದ್ದ ಜಾಗ ಕಳೆದುಕೊಂಡಿದ್ದಾರೆ. ಕೆಲವರು ಬಾವುಟಗುಡ್ಡೆಯ ಟಾಗೋರ್ ಪಾರ್ಕ್‌ಗೆ ಸ್ಥಾನ ಬದಲಾಯಿಸಿದ್ದಾರೆ. ಆದರೆ ಅಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎಂಬ ಆರೋಪ ಹಿರಿಯ ನಾಗರಿಕರದ್ದು. ಕೆಲವೊಬ್ಬರು ಪಾರ್ಕ್‌ಗೆ ಹೋಗುವುದನ್ನೂ ಬಿಟ್ಟಿದ್ದಾರೆ.

    ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣ
    ಗಾಂಧಿ ಪಾರ್ಕ್ ಅನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣ ಮಾಡಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಉದ್ದೇಶಿಸಿದೆ. ಅಂಡರ್‌ಪಾಸ್ ಕೆಲಸ ಮುಗಿದ ಬಳಿಕ ಪಾರ್ಕ್ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಈಗ ಇರುವುದಕ್ಕಿಂತ ದೊಡ್ಡ ಉತ್ತಮ ಗಾಂಧಿ ಪಾರ್ಕ್ ಅನ್ನು ನಾವು ಕಾಣಬಹುದು. ಆರು ತಿಂಗಳಲ್ಲಿ ಈ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು.

     

    ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಗಾಂಧಿ ಪಾರ್ಕ್ ಅಸ್ತಿತ್ವ ಕಳೆದುಕೊಳ್ಳಬೇಕಾಗಿ ಬಂದಿದೆ. 6 ಕೋಟಿ ರೂ. ವೆಚ್ಚದ ಈ ಕಾಮಗಾರಿಯಲ್ಲಿ ಗಾಂಧಿ ಪಾರ್ಕ್ ಅಭಿವೃದ್ಧಿಯೂ ಸೇರಿದೆ. ಅಂಡರ್‌ಪಾಸ್ ಕೆಲಸ ಮುಗಿದ ಬಳಿಕ ಪಾರ್ಕನ್ನು ಅತ್ಯಾಧುನಿಕವಾಗಿ ನವೀಕರಣ ಮಾಡುತ್ತೇವೆ. ಇದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿದೆ.
    ಮೊಹಮ್ಮದ್ ನಜೀರ್
    ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಆಡಳಿತ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts