ಕೊಪ್ಪಳ: ವಾರ್ತಾ ಇಲಾಖೆಯಿಂದ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ಇಬ್ಬರು ಬಹುಮಾನ ಪಡೆದಿದ್ದಾರೆ.
ಹಂಪಿ ಕನ್ನಡ ವಿವಿ ಸ್ನಾತಕೋತ್ತರ ವಿದ್ಯಾರ್ಥಿ, ಗೊಂಡಬಾಳ ಗ್ರಾಮದ ಪ್ರವಿಣ ನಿಂಗಪ್ಪ ಕಿತ್ತೂರು “ಗಾಂಧೀಜಿಯವರ ಸ್ವರಾಜ್ ಮತ್ತು ಆರ್ಥಿಕ ಚಿಂತನೆಗಳು’ ಪ್ರಬಂಧ ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ. ತುಮಕೂರು ವಿವಿಯಲ್ಲಿ ಎಂಎ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವ ಕುಷ್ಟಗಿ ತಾಲೂಕಿನ ಎಂ.ಗುಡದೂರು ಗ್ರಾಮದ ಶರಣಪ್ಪ ಬರೆದ “ದೇಶ ನಿರ್ಮಾಣದಲ್ಲಿ ಗಾಂಧೀಜಿಯವರ ಜಾತ್ಯಾತಿತ ನಿಲುವುಗಳು’ ಪ್ರಬಂಧ ದ್ವೀತಿಯ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ವಾರ್ತಾಸೌಧದಲ್ಲಿ ಅ.2ರಂದು ನಡೆದ ಸಮಾರಂಭದಲ್ಲಿ ವಿಜೇತರಿಗೆ ಕ್ರಮವಾಗಿ 31 ಸಾವಿರ ರೂ. ಹಾಗೂ 21 ಸಾವಿರ ರೂ. ನಗದು ಪುರಸ್ಕಾರ ನೀಡಿ ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದ್ದಾರೆ.
ಶಾಸಕ ರಿಜ್ವಾನ್ ಅರ್ಷದ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ವಾರ್ತಾ ಇಲಾಖೆ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಇದ್ದರು.