ನಾಥೂರಾಮ್​ ಗೂಡ್ಸೆ ಒಬ್ಬ….: ಕಮಲ್​ ಹಾಸನ್​ ವಿವಾದಾತ್ಮಕ ಹೇಳಿಕೆಗೆ ಸಾಧ್ವಿ ಪ್ರಜ್ಞಾ ಸಿಂಗ್​ ತಿರುಗೇಟು

ನವದೆಹಲಿ: ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ನಾಥೂರಾಮ್​ ಗೂಡ್ಸೆ ಅವರನ್ನು ಉದ್ದೇಶಿಸಿ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದು ಎಂಬ ನಟ ಹಾಗೂ ರಾಜಕಾರಣಿ ಕಮಲ್​ ಹಾಸನ್​ ಹೇಳಿಕೆ ದೇಶದೆಲ್ಲೆಡೆ ವಿವಾದದ ಅಲೆ ಎಬ್ಬಿಸಿದ್ದು, ಪರ-ವಿರೋಧದ ಕೂಗು ಕೇಳಿಬರುತ್ತಿದೆ. ಇದೀಗ ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಕಮಲ್​ ಹೇಳಿಕೆಯನ್ನು ಖಂಡಿಸಿದ್ದಾರೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗುರುವಾರ ಉತ್ತರಿಸಿದ ಅವರು, ನಾಥೂರಾಮ್​ ಗೂಡ್ಸೆ ಒಬ್ಬ ದೇಶಭಕ್ತ. ಅವರು ದೇಶಭಕ್ತರಾಗಿಯೇ ಕೊನೆಯವರೆಗೂ ಉಳಿಯುತ್ತಾರೆ. ತಮ್ಮ ಅಂತರಾಳವನ್ನು ಅರಿತುಕೊಳ್ಳುವ ಬದಲು ಗೂಡ್ಸೆ ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಾರೆ. ಅಂತಹವರಿಗೆ ಜನರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಜ್ಞಾ ಸಿಂಗ್​ ಕಿಡಿಕಾರಿದರು.

ಪ್ರಜ್ಞಾ ಸಿಂಗ್​ ಹೇಳಿಕೆಯನ್ನು ಬಿಜೆಪಿಯೇ ಖಂಡಿಸಿದ್ದು, ಖಂಡಿತವಾಗಿಯೂ ಅವರು ಜನರ ಬಳಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ. ಬಿಜೆಪಿಯು ಪ್ರಜ್ಞಾ ಸಿಂಗ್​ ಹೇಳಿಕೆಯನ್ನು ಒಪ್ಪುವುದಿಲ್ಲ. ನಾವು ಅದನ್ನು ಖಂಡಿಸುತ್ತೇವೆ. ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಪಕ್ಷವೂ ಅವರನ್ನು ತಾಕೀತು ಮಾಡಲಿದೆ. ಅವರು ಖಂಡಿತವಾಗಿಯೂ ಸಾರ್ವಜನಿಕರ ಬಳಿ ಕ್ಷಮೆಯಾಚಿಸಬೇಕು ಎಂದು ಪಕ್ಷದ ವಕ್ತರಾರಾದ ಜಿವಿಎಲ್​ ನರಸಿಂಹರಾವ್​ ತಿಳಿಸಿದ್ದಾರೆ.

2008ರಲ್ಲಿ ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ಎರಡು ಸೈಕಲ್‌ಗಳಲ್ಲಿ ಅಳವಡಿಸಲಾಗಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಏಳು ಜನರು ಮೃತಪಟ್ಟು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಾಧ್ವಿ ಪ್ರಜ್ಞಾ ಸಿಂಗ್​ ಮತ್ತು ಲೆ. ಕರ್ನಲ್‌ ಪ್ರಸಾದ್‌ ಶ್ರೀಕಾಂತ್‌ ಪುರೋಹಿತ್‌ ಇಬ್ಬರು ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದರು. 9 ವರ್ಷ ಜೈಲುವಾಸವನ್ನು ಅನುಭವಿಸಿದ ಬಳಿಕ ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ.

ಕಳೆದ ಭಾನುವಾರ ರಾತ್ರಿ ತಮಿಳುನಾಡಿನ ಅರವಕುರಿಚಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಮಕ್ಕಳ ನಿಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್​ ಹಾಸನ್,​ ಮುಸ್ಲಿಂ ಸಮುದಾಯದವರು ಈ ಪ್ರದೇಶದಲ್ಲಿ ಹೆಚ್ಚಿದ್ದಾರೆ ಎಂದು ನಾನಿದ್ದನ್ನು ಹೇಳುತ್ತಿಲ್ಲ. ಆದರೆ, ಮಹಾತ್ಮ ಗಾಂಧೀಜಿ ಪ್ರತಿಮೆ ಮುಂದೆ ನಿಂತು ಹೇಳುತ್ತಿದ್ದೇನೆ. ಈ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದು. ಅವನ ಹೆಸರು ನಾಥೂರಾಮ್​ ಗೂಡ್ಸೆ. ಅಲ್ಲಿಂದಲೇ ಭಯೋತ್ಪಾದನೆ ಪ್ರಾರಂಭವಾಯಿತು ಎಂದು ಹೇಳಿಕೆ ನೀಡಿದ್ದರು. ಬಳಿಕ ರಾಷ್ಟ್ರಾದ್ಯಂತ ಈ ಹೇಳಿಕೆಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *