ಶಿವಮೊಗ್ಗ: ಸತತ 17 ತಾಸುಗಳ ಭವ್ಯ ಮೆರವಣಿಗೆ ಬಳಿಕ ಬುಧವಾರ ಬೆಳಗಿನ ಜಾವ 4.14ಕ್ಕೆ ಹಿಂದು ಮಹಾಸಭಾ ಗಣೇಶ ಮೂರ್ತಿಯನ್ನು ತುಂಗಾ ನದಿಯ ಭೀಮನ ಮಡುವಿನಲ್ಲಿ ವಿಸರ್ಜಿಸಲಾಯಿತು. ಮಂಗಳವಾರ ಬೆಳಗ್ಗೆ 11ಕ್ಕೆ ಆರಂಭವಾದ ಮೆರವಣಿಗೆ ದೀರ್ಘ ಅವಧಿ ನಡೆದಿದ್ದು ವಿಶೇಷ.
ಮೆರವಣಿಗೆ ಆರಂಭದಿಂದಲೂ ಸಾವಿರಾರು ಮಂದಿ ಸಾಕ್ಷಿಯಾಗಿದ್ದು ಕೂಡ ಅಪರೂಪ. ಅದರಲ್ಲೂ ಈ ಬಾರಿ ಮೆರವಣಿಗೆಗೆ ಜನಸಾಗರವೇ ಹರಿದು ಬಂದಿತು. ಹಿಂದೆಂದಿಗಿಂತಲೂ ಸಾವಧಾನವಾಗಿ ಮೆರವಣಿಗೆ ಸಾಗಿತು. ರಾತ್ರಿ 10ಕ್ಕೆ ಗೋಪಿ ವೃತ್ತದಿಂದ ಹೊರಟ ಮೆರವಣಿಗೆ ದುರ್ಗಿಗುಡಿ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಮಹಾವೀರ ವೃತ್ತ ದಾಟುವವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ದರ್ಶನ ಪಡೆದರು. ಈ ಮಾರ್ಗದಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳಿಂದ ಗಣೇಶ ಮೂರ್ತಿಗೆ ಹಾರ ಸಮರ್ಪಿಸಲಾಯಿತು.
ಸಹಸ್ರ ಸಂಖ್ಯೆಯಲ್ಲಿ ಜನರು ಸೇರಿದ್ದರೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗ ಮಾತ್ರವಲ್ಲದೆ ನಗರದ ಸೂಕ್ಷ್ಮ ಪ್ರದೇಶದಲ್ಲೂ ಹದ್ದಿನ ಕಣ್ಣಿರಿಸಲಾಗಿತ್ತು. ಪ್ರಮುಖ ಜಾಗಗಳಲ್ಲಿ ಕಣ್ಣಾವಲಿತ್ತು.
ರಜೆ ಎಫೆಕ್ಟ್‌ನಿಂದ ಜನ: ಈ ಬಾರಿ ಹಿಂದು ಮಹಾಸಭಾ ಗಣೇಶನ ಮೆರವಣಿಗೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಲು ಸಾಲು ಸಾಲು ರಜೆ ದಿನಗಳೂ ಕಾರಣ. ಬೇರೆ ಊರುಗಳಲ್ಲಿ ಶಿಕ್ಷಣ, ಉದ್ಯೋಗ ನಿಮಿತ್ತ ನೆಲೆಸಿದ್ದ ಮಂದಿ ಸೆ.14ರಿಂದ ಮೂರು ದಿನ ರಜೆ ಇದ್ದ ಕಾರಣ ಶಿವಮೊಗ್ಗಕ್ಕೆ ಬಂದಿದ್ದರು. ಗೆಳೆಯರು, ಸಂಬಂಧಿಕರನ್ನೂ ಆಹ್ವಾನಿಸಿದ್ದರು. ಇದರಿಂದ ನಿರೀಕ್ಷೆಗೂ ಮೀರಿ ಜನದಟ್ಟಣೆ ಉಂಟಾಗಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ ಎಎ ವೃತ್ತ, ಗೋಪಿ ವೃತ್ತ ದಾಟಿದ ಬಳಿಕ ಮೆರವಣಿಗೆಯ ಖದರ್ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ. ಕುವೆಂಪು ರಸ್ತೆಯಲ್ಲೂ ಜನರು ಸಂಭ್ರಮದಿಂದ ಗಣೇಶನ ಎದುರು ನೋಡುತ್ತಿದ್ದರು.
ಅಲಂಕಾರವೇ ಆಕರ್ಷಣೆ: ಈ ಬಾರಿ ಗಣೇಶನ ಮೆರವಣಿಗೆಯಲ್ಲಿ ಜನರನ್ನು ಹೆಚ್ಚಾಗಿ ಆಕರ್ಷಿಸಿದ್ದು ನಗರದ ಪ್ರಮುಖ ವೃತ್ತಗಳ ಸಿಂಗಾರ. ಕಳೆದ ಐದಾರು ವರ್ಷಗಳಿಂದ ಹಿಂದು ಅಲಂಕಾರ ಸಮಿತಿ ವಿಶೇಷ ಶ್ರಮವಹಿಸಿ ವಿಶೇಷ ಅಲಂಕಾರಗಳನ್ನು ಮಾಡುತ್ತಿದೆ. ಕಲಾವಿದ ಜೀವನ್ ಹಾಗೂ ತಂಡದ ಕಾರ್ಯ ನಾಗರಿಕರಿಗೆ ಅಚ್ಚುಮೆಚ್ಚಾಗಿದೆ. ಮೆರವಣಿಗೆ ಆರಂಭದ ಒಂದೆರಡು ದಿನದ ಹಿಂದಿನವರೆಗೂ ಈ ಬಾರಿ ಗಾಂಧಿ ಬಜಾರ್ ಮುಖ್ಯ ದ್ವಾರ, ಶಿವಪ್ಪನಾಯಕ ವೃತ್ತದಲ್ಲಿ ಯಾವ ಅಲಂಕಾರ ಮಾಡುತ್ತಾರೆ? ಎಂದು ಸಾರ್ವಜನಿಕವಾಗಿ ಚರ್ಚೆಗಳು ನಡೆಯುವಷ್ಟರ ಮಟ್ಟಿಗೆ ಅಲಂಕಾರ ಸಮಿತಿ ಕ್ರಿಯಾಶೀಲತೆ ಮೆರೆದಿದೆ. ಮೆರವಣಿಗೆ ಹೆಚ್ಚು ಜನರನ್ನು ಆಕರ್ಷಿಸುವ ವಿಷಯದಲ್ಲಿ ಹಿಂದು ಅಲಂಕಾರ ಸಮಿತಿಗೆ ಹೆಚ್ಚಿನ ಶ್ರೇಯ ಸಿಗಲೇಬೇಕು.