ಕ್ರೀಡಾಕೂಟ, ಸಾಂಸ್ಕೃತಿಕ ಸಮಾರೋಪ

ಸುಂಟಿಕೊಪ್ಪ: 19 ವರ್ಷಗಳಿಂದ ಸತತವಾಗಿ ಜಾತಿ, ಮತ, ಧರ್ಮ ಬೇಧವಿಲ್ಲದೆ ಗ್ರಾಮೀಣ ಕ್ರೀಡಾಕೂಟಕ್ಕೆ ಉತ್ತೇಜನೆ ನೀಡಿ ಜನರನ್ನು ಒಗ್ಗೂಡಿಸಿ ಸಮಾಜ ಮುಖಿ ಕೆಲಸದಲ್ಲಿ ನಾಕೂರು ಫ್ರೆಂಡ್ಸ್ ಯೂತ್ ಕ್ಲಬ್ ತೊಡಗಿರುವುದು ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಹೇಳಿದರು.

ಕಾನ್‌ಬೈಲ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಸಂಘ ಸಂಸ್ಥೆಗಳು ಹುಟ್ಟುವುದು ಸುಲಭ. ಆದರೆ, ಅದನ್ನು ಉಳಿಸಿಕೊಂಡು ಹೋಗುವುದು ಕಷ್ಟಕರ ಎಂದರು.

ಕೆಲ ಸಂಘ ಸಂಸ್ಥೆಗಳು ಕಣ್ಮರೆಯಾಗುತ್ತಿವೆ. ಆದರೆ ಫ್ರೆಂಡ್ಸ್ ಯೂತ್ ಕ್ಲಬ್ ಸದಸ್ಯರ ಪರಿಶ್ರಮ ಹಾಗೂ ದಾನಿಗಳ ಸಹಕಾರದಿಂದ 19 ವರ್ಷದಿಂದ ಕ್ರೀಡಾಕೂಟ ನಡೆಸುತ್ತಾ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಿ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಸದಸ್ಯೆ ಎಚ್.ಡಿ.ಮಣಿ ಮಾತನಾಡಿದರು. ನಾಕೂರು ಶಿರಂಗಾಲ ಗ್ರಾಪಂ ಉಪಾಧ್ಯಕ್ಷೆ ಯಶೋದಾ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯ ಅಧ್ಯಕ್ಷತೆ ವಹಿಸಿದರು. ಗ್ರಾಪಂ ಸದಸ್ಯರಾದ ಚೆನ್ನಮ್ಮ, ಅಂಬೆಕಲ್ ಚಂದ್ರು, ಕಾನ್‌ಬೈಲ್ ತೋಟದ ವ್ಯವಸ್ಥಾಪಕ ಪಿ.ಜಿ.ಹೆಗ್ಡೆ, ಕಾಫಿ ಬೆಳೆಗಾರರಾದ ಎ.ಪಿ.ಧರ್ಮಪ್ಪ, ನೀಲಮ್ಮ ಪೆಮ್ಮಯ್ಯ, ಲಿಲ್ಲಿ ಸೋಮಯ್ಯ, ಡೀನಾ ಈರಪ್ಪ, ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಶಂಕರನಾರಾಯಣ ಉಪಸ್ಥಿತರಿದ್ದರು.