‘ಗೇಮ್​ ಚೇಂಜರ್’​ ಆತ್ಮಚರಿತ್ರೆಯಲ್ಲಿ ಗೌತಿ​ ವಿರುದ್ಧ ಗುಡುಗಿದ ಅಫ್ರಿದಿ: ಗಂಭೀರ್​ಗೆ ವ್ಯಕ್ತಿತ್ವವೇ ಇಲ್ಲವಂತೆ

ನವದೆಹಲಿ: ಕ್ರಿಕೆಟ್​ಗೆ ವಿದಾಯ ಹೇಳಿದ ಹಲವು ದಿನಗಳ ಬಳಿಕ ಬಿಜೆಪಿಗೆ ಸೇರಿ ಪೂರ್ವ ದೆಹಲಿಯ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯುವುದರ ಮೂಲಕ ರಾಜಕೀಯ ರಂಗ ಪ್ರವೇಶಿಸಿರುವ ಗೌತಮ್​ ಗಂಭೀರ್​ ವಿರುದ್ಧ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್​ ಅಫ್ರಿದಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಟೀಕಿಸಿದ್ದಾರೆ.

ಇತ್ತೀಚೆಗಷ್ಟೇ ಅಫ್ರಿದಿ ಅವರು ‘ಗೇಮ್​ ಚೇಂಜರ್​’ ಹೆಸರಿನ ಆತ್ಮ ಚರಿತ್ರೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗಂಭೀರ್​ ಹೆಸರನ್ನು ಉಲ್ಲೇಖಿಸಿ, ಆತನಿಗೆ ವ್ಯಕ್ತಿತ್ವವೇ ಇಲ್ಲ. ಅವನ ವರ್ತನೆಯೂ ಸರಿಯಿಲ್ಲ ಎಂದು ಜರಿದಿದ್ದಾರೆ. ಅಲ್ಲದೆ, ಕ್ರಿಕೆಟ್​ನಲ್ಲಿ ಗಂಭೀರ್​ ಅವರದ್ದು ಒಂದು ಪಾತ್ರವಷ್ಟೇ. ಆತನ ವರ್ತನೆಯಿಂದಲೇ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವಂತಹ ದಾಖಲೆಯನ್ನೂ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಡಾನ್​ ಬ್ರಾಡ್​ಮನ್​ ಮತ್ತು ಜೇಮ್ಸ್​ ಬಾಂಡ್​ ನಡುವಿನ ಮಿಶ್ರ ತಳಿಯಂತೆ ಗಂಭೀರ್​ ಅವರು ವರ್ತಿಸುತ್ತಾರೆ. ನಮ್ಮ ಕರಾಚಿಯಲ್ಲಿ ಇಂತಹ ವ್ಯಕ್ತಿತ್ವದ ವ್ಯಕ್ತಿಯನ್ನು ಸರೈಲ್​(ಏನೇ ಹೇಳಿದರೂ ಕೋಪಿಸಿಕೊಳ್ಳುವುದು) ಎಂದು ಕರೆಯುತ್ತೇವೆ. ಧನಾತ್ಮಕ ವ್ಯಕ್ತಿಗಳನ್ನು ಕಂಡರೆ ನನಗೆ ಸಂತೋಷವಾಗುತ್ತದೆ. ಯಾರೇ ಆಗಲಿ ಅವರು ಆಕ್ರಮಣಕಾರಿಯೋ ಅಥವಾ ಸ್ಪರ್ಧಾತ್ಮಕವಾಗಿರುವುದು ಮುಖ್ಯವಲ್ಲ. ಧನಾತ್ಮಕವಾಗಿರಬೇಕು. ಆದರೆ, ಗಂಭೀರ್​ ಆ ರೀತಿಯಲ್ಲ ಎಂದು ಅಫ್ರಿದಿ ಬರೆದುಕೊಂಡಿದ್ದಾರೆ.

2007ರ ಏಷಿಯಾ ಕಪ್​ನಲ್ಲಿ ಕಾನ್ಪುರದಲ್ಲಿ ನಡೆದ ಪಂದ್ಯವೊಂದರಲ್ಲಿ ಉಭಯ ಆಟಗಾರರ ನಡುವೆ ನಡೆದ ಘಟನೆಯಿಂದ ಇಬ್ಬರು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ದಂಡ ಕಟ್ಟಿದ್ದರು. ಇದನ್ನು ಆತ್ಮಚರಿತ್ರೆಯಲ್ಲಿ ಮೆಲಕು ಹಾಕಿರುವ ಅಫ್ರಿದಿ, ನನಗೆ ನೆನಪಿದೆ ಅಂದು ಗಂಭೀರ್ ನನ್ನ ಎಸೆತದಲ್ಲಿ ಮೊದಲ ರನ್ ಕದಿಯುವಾಗ ನನ್ನತ್ತ ಓಡಿ ಬಂದು ನನಗೆ ಗುದ್ದಿದ್ದರು. ಈ ವೇಳೆ ಅಂಪೈರ್​ ಹಾಗೂ ನಾನು ಇಲ್ಲಿಗೆ ಬಿಟ್ಟುಬಿಡಬೇಕೆಂದುಕೊಂಡೆವು. ಆದರೆ, ಗಂಭೀರ್​ ಅದನ್ನು ಮುಂದುವರಿಸಿದರು. ಅದು ವ್ಯಯಕ್ತಿಯ ನಿಂದನೆಗಳಿಗೆ ಕಾರಣವಾಯಿತು ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)