| ಪಂಕಜ ಕೆ.ಎಂ., ಬೆಂಗಳೂರು

ಬಿಸಿಲ ಝುಳ ಹೆಚ್ಚಾಗಿದ್ದರೂ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವ ಜನರು ನಿರ್ಜಲೀಕರಣ (ಡಿ-ಹೈಡರೇಟ್)ಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಪಿತ್ತಕೋಶದ ಸಮಸ್ಯೆಗೆ ಹೆಚ್ಚುತ್ತಿದ್ದು, ಕಳೆದೆರಡು ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ.
ಸಮರ್ಪಕವಾಗಿ ನೀರು ಕುಡಿಯದಿರುವುದರಿಂದ ಪಿತ್ತಕೋಶದಲ್ಲಿ ಕಲ್ಲಿನ ಸಮಸ್ಯೆ ಹೊಂದಿರುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30 ರಿಂದ 60ಕ್ಕೆ ಏರಿಕೆಯಾಗಿದೆ ಎನ್ನುತ್ತಾರೆ ಗ್ಯಾಸ್ಟ್ರೋಎಂಟರಾಲಜಿ ತಜ್ಞರು. ಜನರು ಅಧಿಕ ಎಣ್ಣೆಯುಕ್ತ ಹಾಗೂ ಮಸಾಲೆ ಪದಾರ್ಥ ಹೊಂದಿರುವ ಆಹಾರ ತಿನ್ನುತ್ತಿದ್ದಾರೆ. ಆದರೆ ಅದಕ್ಕೆ ಪೂರಕವಾಗಿ ನೀರು ಸೇವಿಸುತ್ತಿಲ್ಲ. ಆಹಾರದಲ್ಲಿನ ಜಿಡ್ಡಿನ ಅಂಶ ಕರಗದೇ ಕ್ರೋಡೀಕರಣಗೊಂಡು ಪಿತ್ತಕೋಶದಲ್ಲಿ ಕಲ್ಲುಗಳಾಗುತ್ತಿವೆ. ಕಳೆದ ಮಾರ್ಚ್, ಏಪ್ರಿಲ್ನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ. ಕೆಲವರು ಆಹಾರ ಸೇವನೆ ನಂತರ ಸೋಡಾ ಸೇರಿ ಕೆಲ ಪಾನೀಯಗಳನ್ನು ಸೇವಿಸಿದ್ದಾಗಿ ಹೇಳುತ್ತಾರೆ. ಆದರೆ ಅದು ನೀರಿಗೆ ಸಮವಲ್ಲ ಎನ್ನುತ್ತಾರೆ ವೈದ್ಯರು.
ಜಡ ಅಭ್ಯಾಸದಿಂದ ಸಮಸ್ಯೆ: ಕೋವಿಡ್ ಪೂರ್ವದಲ್ಲಿ ವಾರದಲ್ಲಿ 1-2 ಇದ್ದ ಪ್ರಕರಣಗಳು ಈಗ 10-12ಕ್ಕೆ ಏರಿಕೆಯಾಗಿವೆ. ಆಹಾರದ ಜತೆಗೆ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಯಿಂದಾಗಿ ಇದು ಹೆಚ್ಚಾಗಿದೆ. ಕೋವಿಡ್ ನಂತರದಲ್ಲಿ ಜನರು ದೈಹಿಕ ಚಟುವಟಿಕೆ ಕಡಿಮೆ ಮಾಡಿದ್ದಾರೆ. ಬಹಳಷ್ಟು ಮಂದಿ ವರ್ಕ್ಫ್ರಮ್ ಹೋಮ್ ಹೆಸರಿನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿರುವುದರಿಂದ ಆಹಾರ ಸರಿಯಾಗಿ ಪಚನಗೊಳ್ಳದೆ ಪಿತ್ತಕೋಶದಲ್ಲಿ ಕಲ್ಲುಗಳು ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕ ಆಹಾರ ಬಳಸಿ: ಕಳೆದ ಒಂದು ಅಥವಾ ಎರಡು ದಶಕಗಳಲ್ಲಿ, ನಮ್ಮ ಆಹಾರ ಪದ್ಧತಿಗಳು ತೀವ್ರವಾಗಿ ಬದಲಾಗಿರುವುದರಿಂದ ಬೊಜ್ಜು ಮತ್ತು ಮಧುಮೇಹ ಕೂಡ ಹೆಚ್ಚುತ್ತಿದೆ. ಇವು ಪಿತ್ತಕೋಶ ಕಲ್ಲುಗಳ ರಚನೆಗೆ ಕಾರಣವಾಗುತ್ತಿವೆ. ಹಾಗಾಗಿ ನಮ್ಮಲ್ಲಿನ ಸಾಂಪ್ರದಾಯಿಕ ಆರೋಗ್ಯಕರ ಹಾಗೂ ತಾಜಾ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ರೋಗ ಲಕ್ಷಣ-ಚಿಕಿತ್ಸೆ
ಹೊಟ್ಟೆಯ ಮೇಲ್ಭಾಗದಲ್ಲಿ ತೀಕ್ಷ್ಣವಾದ ನೋವು, ವಾಕರಿಕೆ ಮತ್ತು ವಾಂತಿ, ಕೊಬ್ಬಿನ ಆಹಾರ ಸೇವಿಸಿದಾಗ ಅಜೀರ್ಣ, ಹೊಟ್ಟೆ ಉಬ್ಬರ ಕಂಡು ಬಂದಲ್ಲಿ ವೈದ್ಯರನ್ನು ಸಂರ್ಪಸಬೇಕು. ಸಾಮಾನ್ಯ ಚಿಕಿತ್ಸೆಗೆ ಸರಿ ಹೋಗದಿದ್ದರೆ ಹೊಟ್ಟೆ ಕಿಬ್ಬೊಟ್ಟೆ ಸ್ಕಾ್ಯನಿಂಗ್ ಮಾಡಿ ಚಿಕಿತ್ಸೆ ನೀಡಲಾಗುತ್ತದೆ.
ಸಾಮಾನ್ಯ ದಿನಗಳಲ್ಲೂ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಬೇಕು. ಕರಿದ ಹಾಗೂ ಮಸಾಲೆ ಪದಾರ್ಥಗಳನ್ನು ಮಿತವಾಗಿ ಸೇವಿಸಬೇಕು. ಬೇಸಿಗೆಯಲ್ಲಿ ಸಾಧ್ಯವಾದಷ್ಟು ದ್ರವರೂಪದ ಆಹಾರ ಬಳಸುವುದು ಉತ್ತಮ.
| ಡಾ. ಎನ್.ಎಸ್.ನಾಗೇಶ್ ನಿರ್ದೇಶಕ ಮತ್ತು ಗ್ಯಾಸ್ಟ್ರೋಎಂಟರಾಲಜಿ ತಜ್ಞ, ಐಗಾಟ್ ಆಸ್ಪತ್ರೆ