ಸಂಕ್ರಾಂತಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಸೂರ್ಯನು ತನ್ನ ಪಥವನ್ನು ಬದಲಿಸಿ ಚಳಿಗಾಲವನ್ನು ಹೊಡೆದೋಡಿಸಿ, ಬೇಸಿಗೆಯ ಕಾಲ ಆರಂಭವಾಗುವ ದಿನವಿದು. ಈ ದಿನ ಗಾಳಿ ಜೋರಾಗಿ ಇರುವ ಕಾರಣ, ಕರ್ನಾಟಕ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಗಾಳಿಪಟ ಉತ್ಸವದ ಸಂಭ್ರಮ. ಕೆಲವು ಕಡೆಗಳಲ್ಲಿ ಈ ಉತ್ಸವವನ್ನು ಆಗಸ್ಟ್, ಸೆಪ್ಟೆಂಬರ್ ತಿಂಗಳಿಗೆ ಆಚರಿಸಿದರೂ ಜ.14 ಅನ್ನು ‘ಅಂತಾರಾಷ್ಟ್ರೀಯವಾಗಿ ಗಾಳಿಪಟ ಉತ್ಸವ’ ಎಂದು ಘೋಷಿಸಲಾಗಿದೆ. ಏಕಿದು ಹಬ್ಬ? ಇದರ ವಿಶೇಷತೆ ಏನು? ಇಲ್ಲಿದೆ ಮಾಹಿತಿ
ಗಾಳಿಪಟ ಹಾರಿಸುವುದಕ್ಕೂ ಒಂದು ಹಬ್ಬ ಬೇಕಾ? ಗಾಳಿಪಟ ಹುಟ್ಟಿದ್ದು ಯಾವಾಗ ಎಂದೆಲ್ಲಾ ನಿಮಗೆ ಪ್ರಶ್ನೆ ಮೂಡಿರಬೇಕಲ್ಲವೆ?
ನಿಮಗೆ ಆಶ್ಚರ್ಯ ಆಗಬಹುದು. ಗಾಳಿಪಟದ ಹುಟ್ಟು ಇಂದು, ನಿನ್ನೆಯದ್ದಲ್ಲ. ಕ್ರಿಸ್ತಪೂರ್ವದಿಂದಲೂ ಅಂದರೆ ಶತಶತಮಾನಗಳ ಹಿಂದಿನಿಂದಲೂ ಇದನ್ನು ಹಾರಿಸುವುದು ರೂಢಿಯಲ್ಲಿತ್ತು. ಮೊದಲು ಇದನ್ನು ಆರಂಭಿಸಿದ್ದು ಚೀನಾ ಮತ್ತು ಜಪಾನ್ ದೇಶಗಳು ಎನ್ನುತ್ತದೆ ಇತಿಹಾಸ. ಗಾಳಿಪಟವನ್ನು ಆಗೆಲ್ಲಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂದೇಶವನ್ನು ರವಾನೆ ಮಾಡಲು ಬಳಸಲಾಗುತ್ತಿತ್ತು.
ರಕ್ಷಣಾ ಕಾರ್ಯಾಚರಣೆಗೂ ಉಪಯೋಗಿಸಲಾಗುತ್ತಿತ್ತಂತೆ. 17ನೇ ಶತಮಾನದಲ್ಲಿ ಸ್ಕಾಟ್ಲೆಂಡ್ನ ವಿಜ್ಞಾನಿಯೊಬ್ಬ ಹವಾಮಾನದ ಬಗ್ಗೆ ತಿಳಿದುಕೊಳ್ಳಲೂ ಇದನ್ನೇ ಬಳಸಿದ್ದನಂತೆ. ಅದಕ್ಕಾಗಿ ಆತ ಸುಮಾರು 3 ಸಾವಿರ ಅಡಿಯಷ್ಟು ಎತ್ತರಕ್ಕೆ ಪಟವನ್ನು ಹಾರಿಸಿ ಅದರಲ್ಲಿ ಉಷ್ಣಮಾಪಕ ಕಟ್ಟಿದ್ದ ಎನ್ನಲಾಗಿದೆ. ಅದು ಸಕ್ಸೆಸ್ ಆದ ನಂತರ ವೈಜ್ಞಾನಿಕ ಸಂಶೋಧನೆಗಳಿಗೂ ಗಾಳಿಪಟ ಬಳಸಲು ಶುರು ಮಾಡಲಾಯಿತು.
ಹೀಗೆ ಕಾಲಕ್ರಮೇಣ ಇದನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಯಿತು. ಲಖನೌದ ನವಾಬರ ಆಳ್ವಿಕೆ ಸಂದರ್ಭದಲ್ಲಿ ಈ ಪಟ ಭಾರತಕ್ಕೆ ಪರಿಚಯವಾಯಿತು. ಇದರ ಸ್ಪರ್ಧೆ ಕೂಡ ಶುರುವಾಗಿದ್ದೂ ಆಗಲೇ. ನವಾಬರು ಗಾಳಿಪಟಗಳ ತುದಿಯಲ್ಲಿ ಬಂಗಾರ ಮತ್ತು ಬೆಳ್ಳಿಯ ಹಾಳೆಗಳನ್ನು ಕಟ್ಟಿ ಹಾರಿಸುತ್ತಿದ್ದರಂತೆ. ಅಷ್ಟು ಶ್ರೀಮಂತ ಹಬ್ಬವಾಗಿತ್ತು ಇದು. ಕಾಲ ಬದಲಾದಂತೆ, ತಂತ್ರಜ್ಞಾನ ಬೆಳೆದಂತೆ ಇದೀಗ ಗಾಳಿಪಟ ಹಬ್ಬವು ಬೇರೆ ಬೇರೆ ರೂಪ ತಾಳಿದೆ.
ಕರ್ನಾಟಕದ ಕೆಲವು ಭಾಗಗಳಲ್ಲಿ ಹಾಗೂ ಪಕ್ಕದ ಗೋವಾದಲ್ಲಿಯೂ ಈ ಬಾರಿಯ ಉತ್ಸವ ಈಗಾಗಲೇ ಶುರುವಾಗಿದೆ. ಮಂಗಳೂರಿನಲ್ಲಿ 2006ರಲ್ಲಿ ‘ಟೀಂ ಮಂಗಳೂರು’ ಎನ್ನುವ ತಂಡ ತಯಾರಿಸಿದ 36 ಅಡಿ ಎತ್ತರದ ಕಥಕ್ಕಳಿ ಗಾಳಿಪಟವು ಭಾರತದಲ್ಲಿಯೇ ಅತಿ ದೊಡ್ಡ ಗಾಳಿಪಟ ಎನಿಸಿದೆ.
ಮೈಸೂರಿನಲ್ಲಿ ಕಳೆದ ವರ್ಷದ ದಸರಾ ಉತ್ಸವದ ಸಂದರ್ಭದಲ್ಲಿ ಗಾಳಿಪಟ ಹಬ್ಬ ಆಚರಿಸಲಾಗಿತ್ತು. ಸಿಂಗಪುರ, ಆಸ್ಟ್ರಿಯಾ, ಚೀನಾ, ಮಲೇಷ್ಯಾ, ಸೌತ್ ಕೊರಿಯಾದಿಂದ ಸುಪ್ರಸಿದ್ಧ ಗಾಳಿಪಟ ಪಟುಗಳು ಭಾಗವಹಿಸಿದ್ದರು. ಬೆಳಗಾವಿಯಲ್ಲಿ 2011ರಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಲಕ್ಷಾಂತರ ಮಂದಿ ಆಗಮಿಸಿದ್ದು ವಿಶೇಷವಾಗಿತ್ತು.
ಕಳೆದ ವರ್ಷ, ಲೋಕಸಭೆ ಚುನಾವಣೆಯಲ್ಲಿ ಮತದಾರರ ಜಾಗೃತಿಗಾಗಿಯೂ ಸಾರ್ವಜನಿಕ ಶಿಕ್ಷಣ ಇಲಾಖೆ ಗಾಳಿಪಟ ಉತ್ಸವ ಹಮ್ಮಿಕೊಂಡಿತ್ತು. ಮತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಕುರಿತು ಪಟದಲ್ಲಿ ಕೆಲವು ಮಾಹಿತಿಗಳನ್ನು ಬರೆದು 130 ಶಾಲೆಯ ಮಕ್ಕಳು ಗಾಳಿಯಲ್ಲಿ ಹಾರಿಬಿಟ್ಟಿದ್ದರು.
ಹಬ್ಬ ಏನು ಹೇಳುತ್ತದೆ?
ಗಾಳಿಪಟಕ್ಕೂ ವಿದ್ಯಾರ್ಥಿ ಜೀವನಕ್ಕೂ ತುಂಬಾ ಹೋಲಿಕೆ ಇದೆ. ಗಾಳಿ ಚೆನ್ನಾಗಿ ಇದ್ದರೆ, ಜತೆಗೆ ಮೈದಾನವೂ ವಿಶಾಲವಾಗಿದ್ದರೆ ಗಾಳಿಪಟ ಚೆನ್ನಾಗಿ ಹಾರುತ್ತಾ ಮೇಲಕ್ಕೆ ಸಾಗುತ್ತದೆ. ಆದರೆ ಪಟಕ್ಕೆ ಏನಾದರೂ ಅಡೆತಡೆ ಬಂದರೆ ಅಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತದೆ. ಅದನ್ನು ಸರಿ ಮಾಡಿ ಪುನಃ ಬಿಟ್ಟರೆ ಚೆನ್ನಾಗಿ ಹಾರುತ್ತದೆ, ಸರಿಯಾಗಿ ಹಾರಿಲ್ಲ ಎಂದು ನಿರಾಸೆಗೊಂಡರೆ ಸೀದಾ ನೆಲಕ್ಕೆ ಉರುಳುತ್ತದೆ.
ವಿದ್ಯಾರ್ಥಿ ಜೀವನವೂ ಹಾಗೆಯೇ. ಎಲ್ಲಾ ಸಂದರ್ಭದಲ್ಲಿಯೂ ಎಲ್ಲವೂ ಸರಿಯಾಗಿಯೇ ಇರಬೇಕೆಂದೇನೂ ಇಲ್ಲವಲ್ಲ. ಏರಿಳಿತ ಇದ್ದೇ ಇರುತ್ತದೆ. ಒಮ್ಮೆ ಕೆಳಕ್ಕೆ ಬಿದ್ದರೆ, ನಿರಾಸರಾಗದೇ ಪುನಃ ಮೇಲೆ ಹೋಗಲು ಟ್ರೖೆ ಮಾಡಿ ನನ್ನಂತೆಯೇ ಮೇಲಕ್ಕೆ ಮೇಲಕ್ಕೆ ಸಾಗಬಹುದು ಎನ್ನುತ್ತದೆ ಗಾಳಿಪಟ.
ಗುಜರಾತ್ನಲ್ಲಿ ದೊಡ್ಡ ಹಬ್ಬ
ಗುಜರಾತ್ನಲ್ಲಿ ಪ್ರತಿವರ್ಷ ಮಕರ ಸಂಕ್ರಾತಿಯ ಸಂದರ್ಭದಲ್ಲಿ ತುಂಬಾ ಸುಂದರವಾಗಿ ಹಾಗೂ ಭರ್ಜರಿಯಾಗಿ ‘ಗಾಳಿಪಟ ಉತ್ಸವ’ವನ್ನು ಆಚರಿಸಲಾಗುತ್ತದೆ. ಗಾಳಿಪಟ ಸ್ಪರ್ಧೆಯೂ ಈ ವೇಳೆ ನಡೆಯುತ್ತದೆ. ಒಬ್ಬರು ಹಾರಿಬಿಡುವ ಗಾಳಿಪಟವನ್ನು ಇನ್ನೊಬ್ಬರು ಆಗಸದಲ್ಲಿಯೇ ತುಂಡರಿಸಲು ಪ್ರಯತ್ನಿಸುತ್ತಾರೆ. ಅದು ಸಕ್ಸಸ್ ಆದರೆ ಅವರು ವಿಜೇತರೆಂದು ಘೋಷಿಸಲಾಗುತ್ತದೆ. ಈ ಉತ್ಸವ ನೋಡಲು ವಿದೇಶಗಳಿಂದಲೂ ಸಾವಿರಾರು ಮಂದಿ ಬರುತ್ತಾರೆ. ಜ.7ರಿಂದಲೇ ಉತ್ಸವ ಆರಂಭವಾಗಿದ್ದು ಇದು ಜ.14ರವರೆಗೂ ನಡೆಯಲಿದೆ.
ಎಚ್ಚರಿಕೆ… ಎಚ್ಚರಿಕೆ…
ಗಾಳಿಪಟ ಹಾರಿಸುವಾಗ ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಲೇಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಪಟ್ಟಣಗಳಲ್ಲಿ ಪಟ ಹಾರಿಸುವಾಗ ಹಳ್ಳ- ಕೊಳ್ಳ, ತೆರೆದ ಬಾವಿಯ ಸಮೀಪ ಸುಳಿಯಲೇಬೇಡಿ. ಇನ್ನು ನಗರ ಪ್ರದೇಶಗಳಲ್ಲಿ ಎತ್ತರದ ಕಟ್ಟಡಗಳ ತುದಿಯಲ್ಲಂತೂ ಹೋಗಲೇಬೇಡಿ. ಏಕೆ ಗೊತ್ತಾ? ಗಾಳಿಪಟ ಹಾರಿಸುವಾಗ ನಿಮ್ಮ ಸಂಪೂರ್ಣ ಮನಸ್ಸು ಆ ಪಟದ ಮೇಲೆಯೇ ಇರುತ್ತದೆ.
ಅದು ಗಾಳಿಯಲ್ಲಿ ಅತ್ತಿತ್ತ ವಾಲುತ್ತಿದ್ದರೆ ಅಥವಾ ಎಲ್ಲಿಯಾದರೂ ಸಿಲುಕಿಬಿಟ್ಟರೆ ಎನ್ನುವ ಭಯದಲ್ಲಿ ಕೈಯಲ್ಲಿರುವ ದಾರವನ್ನು ಸರಿ ಮಾಡಲು ಹೋದಾಗ ನೀವೂ ಅತ್ತಿತ್ತ ಓಲಾಡಿ ಅನಾಹುತವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾಲಕರ ಜತೆಯಲ್ಲಿಯೇ ಅಥವಾ ತುಂಬಾ ಸುರಕ್ಷಿತ ಜಾಗ ಎನಿಸಿದ್ದಲ್ಲಿ ಮಾತ್ರ ಪಟ ಹಾರಿಸಲು ಹೋಗಿ. ಹಾಗೆಯೇ ಪಟವು ಎಲ್ಲಿಯಾದರೂ ಕಠಿಣ ಜಾಗದಲ್ಲಿ ಸಿಲುಕಿ ಬಿದ್ದರೆ ನೀವೂ ಅದನ್ನು ತೆಗೆಯಲು ಹೋಗಬೇಡಿ, ನಿಮ್ಮ ಹಿರಿಯರಿಗೂ ಅದನ್ನು ತಂದುಕೊಡುವಂತೆ ದುಂಬಾಲು ಬೀಳಬೇಡಿ. ಈ ಹಿಂದೆ ಹೀಗೆ ಮಾಡಲು ಹೋದ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.