ಭರತ್ ಶೆಟ್ಟಿಗಾರ್ ಮಂಗಳೂರು
ಕೊಚ್ಚಿಯಿಂದ ಮಂಗಳೂರಿಗೆ ನೈಸರ್ಗಿಕ ಅನಿಲ ಪೂರೈಕೆ ಮಾಡುವ ಉದ್ದೇಶದಿಂದ ನಡೆಯುತ್ತಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಗೈಲ್) ಪೈಪ್ಲೈನ್ ಅಳವಡಿಕೆ ಕಾಮಗಾರಿ ಅಂತಿಮ ಹಂತ ತಲುಪಿದೆ.
445 ಕಿ.ಮೀ. ದೀರ್ಘ ಪೈಪ್ಲೈನ್ ಕಾಮಗಾರಿಯಲ್ಲಿ 6.7 ಕಿ.ಮೀ. ಕೆಲಸ ಮಾತ್ರ ಬಾಕಿ ಉಳಿದಿದೆ. ಈ ಪೈಕಿ, ಮಂಗಳೂರು ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ 4 ಕಿ.ಮೀ. ಕಾಮಗಾರಿ ಬಾಕಿ ಇದೆ. ನೇತ್ರಾವತಿ ನದಿಗೆ ಅಡ್ಡಲಾಗಿ ಫರಂಗಿಪೇಟೆ ಬಳಿ ಅರ್ಕುಳದಿಂದ ಇನ್ನೊಂದು ಭಾಗಕ್ಕೆ 1.5 ಕಿ.ಮೀ.ಉದ್ದದ ಪೈಪ್ಲೈನ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ಇತರ ಸಣ್ಣ ಜಾಯಿಂಟ್ ಕೆಲಸಗಳು ಬಾಕಿ ಇವೆ. ಉಳಿದಂತೆ, ಕೇರಳದ ಕಾಸರಗೋಡು ಮತ್ತು ಕೋಯಿಕ್ಕೋಡ್ನಲ್ಲಿ ಕೆಲಸ ನಡೆಯುತ್ತಿದೆ.
ಆಗಸ್ಟ್ನಲ್ಲಿ ಪೂರ್ಣ: 2018ರ ಡಿಸೆಂಬರ್ ತಿಂಗಳೊಳಗೆ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ಕೇರಳ ಪ್ರವಾಹ ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನವಾಗಿ ಮಾರ್ಚ್ಗೆ ಮುಂದೂಡಲ್ಪಟ್ಟಿತು. ಅದು ಕೂಡ ಸಾಧ್ಯವಾಗದೆ, ಮೇ ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಯಿತು. ಈಗ ಆಗಸ್ಟ್ 31ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಬಾಕಿ ಇರುವ ಕಾಮಗಾರಿ ಪೈಕಿ ನೇತ್ರಾವತಿ ನದಿಯಲ್ಲಿ ಪೈಪ್ ಅಳವಡಿಕೆ ದೊಡ್ಡ ಕಾಮಗಾರಿ.
ನೇತ್ರಾವತಿ ಅಡ್ಡಲಾಗಿ ಪೈಪ್: ಫರಂಗಿಪೇಟೆ ಅರ್ಕುಳ ಬಳಿ ನೇತ್ರಾವತಿ ನದಿಗೆ ಅಡ್ಡಲಾಗಿ ಪೈಪ್ಲೈನ್ ಅಳವಡಿಸುವ ಕಾಮಗಾರಿ ಹಲವು ತಿಂಗಳಿಂದ ನಡೆಯುತ್ತಿದೆ. ಇನ್ನೊಂದು ಭಾಗದಿಂದ ನದಿಯಲ್ಲಿ ಅರ್ಧದವರೆಗೆ ಪೈಪ್ ಅಳವಡಿಕೆ ಪೂರ್ಣಗೊಂಡಿದ್ದು, ಅಲ್ಲಿಂದ ಮುಂದಕ್ಕೆ ಫರಂಗಿಪೇಟೆ ಕಡೆಗೆ ಕೆಲಸ ಬಾಕಿ ಇದೆ.
ಬುಧವಾರ ರಾತ್ರಿ ಸುರಿದ ಮಳೆಗೆ ಪೈಪ್ ಅಳವಡಿಸಲು ಮಣ್ಣು ತೆಗೆದಲ್ಲಿ ನೀರು ತುಂಬಿದೆ. ಸಂಸ್ಥೆಯ ಉನ್ನತ ಮಟ್ಟದ ಇಂಜಿನಿಯರ್ಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಕೆಲಸ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಾಮಗಾರಿ ಮುಗಿಯುವ ಮೊದಲು ಮಳೆಗಾಲ ಆರಂಭವಾದರೆ ದೊಡ್ಡ ಸಮಸ್ಯೆಯಾಗಬಹುದು. ಅದಕ್ಕೂ ಮೊದಲು ಕಾಮಗಾರಿ ಮುಗಿಸಬೇಕೆಂದು ಯೋಜಿಸಲಾಗಿದೆ.
ಗುರುಪುರ ಫಲ್ಗುಣಿ ನದಿಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ.
ಎಂಸಿಎಫ್ಗೆ ಅನಿಲ ಪೂರೈಕೆ
ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡು, ಅನಿಲ ಸರಬರಾಜು ಆರಂಭಗೊಂಡ ಬಳಿಕ ಎಂಸಿಎಫ್ಗೆ ಪೂರೈಕೆಯಾಗಲಿದೆ. ಇದರೊಂದಿಗೆ ಎಂಸಿಎಫ್ನಲ್ಲಿ ನಾಫ್ತಾ ಬದಲು ನೈಸರ್ಗಿಕ ಅನಿಲದಲ್ಲಿ ಗೊಬ್ಬರ ಉತ್ಪಾದನೆ ಆರಂಭವಾಗಲಿದೆ. ಇದಕ್ಕೆ ಪೂರಕ ಸಿದ್ಧತೆ ಆರಂಭಗೊಂಡಿದ್ದು, ಯಂತ್ರೋಪಕರಣ ಸಹಿತ ಕೇಂದ್ರವನ್ನು 315 ಕೋಟಿ ರೂ.ವೆಚ್ಚದಲ್ಲಿ ಮರುಸ್ಥಾಪಿಸಲಾಗಿದೆ. ಅನಿಲ ಪೂರೈಕೆ ಆರಂಭವಾಗುತ್ತಿದ್ದಂತೆ ಕೇಂದ್ರ ಕಾರ್ಯಾರಂಭಿಸಲಿದೆ. ಜತೆಗೆ ಮಂಗಳೂರು, ಉಡುಪಿ ನಗರಗಳಲ್ಲಿ ಮನೆಗಳಿಗೆ ಅಡುಗೆ ಅನಿಲವಾಗಿ ಬಳಕೆಗೂ ನೈಸರ್ಗಿಕ ಅನಿಲ(ಪಿಎನ್ಜಿ) ಪೂರೈಕೆಯಾಗಲಿದೆ. ಉಭಯ ಜಿಲ್ಲೆಗಳಲ್ಲಿ ವಾಹನ ಹಾಗೂ ಕೈಗಾರಿಕೆಗಳ ಬಳಕೆಗೂ ಅನಿಲ ಸಿಗಲಿದೆ.
ಪೈಪ್ಲೈನ್ ಮಾರ್ಗ
ಕಾಸರಗೋಡು ಜಿಲ್ಲೆಯಿಂದ ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳ 16 ಗ್ರಾಮಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 35 ಕಿ.ಮೀ. ಪೈಪ್ಲೈನ್ ಸಾಗಲಿದೆ. ಕೈರಂಗಳ, ಬಾಳೆಪುಣಿ, ಕುರ್ನಾಡು, ಪಜೀರು, ಪಾವೂರು, ಅರ್ಕುಳ, ಮೇರಮಜಲು, ಮಲ್ಲೂರು, ಅಮ್ಮುಂಜೆ, ಅಡ್ಡೂರು, ಮೂಳೂರು, ಕಂದಾವರ, ಅದ್ಯಪಾಡಿ, ಮರವೂರು, ಕೆಂಜಾರು, ತೋಕೂರಿಗೆ ಪೈಪ್ಲೈನ್ ತಲುಪಲಿದೆ.
ನೇತ್ರಾವತಿ ನದಿಯಲ್ಲಿ ಪೈಪ್ ಅಳವಡಿಕೆ ಬಾಕಿ ಉಳಿದಿರುವ ದೊಡ್ಡ ಕಾಮಗಾರಿ. ಜೂನ್ ತಿಂಗಳೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಅಂದುಕೊಂಡಂತೆ ನಡೆದರೆ ಆ.31ರೊಳಗೆ ಪೈಪ್ಪೈಲ್ ಕಾಮಗಾರಿ ಮುಗಿಯಲಿದೆ.
– ಟೋನಿ ಮ್ಯಾಥ್ಯು, ಜನರಲ್ ಮ್ಯಾನೇಜರ್, ಗೈಲ್, ಕೊಚ್ಚಿನ್