ಪ್ರೇಮಕಥೆಯ ಹಿನ್ನೆಲೆಯಲ್ಲಿ ಗಡಿ ಸಮಸ್ಯೆಗಳ ಬಗ್ಗೆ ತಿಳಿಸಲು ನಿರ್ದೇಶಕ ನಾಗ್ ಹುಣಸೋಡ್ ‘ಗಡಿನಾಡು’ ಸಿನಿಮಾ ಮಾಡಿದ್ದಾರೆ. ಶುಕ್ರವಾರ (ಜ.24) ಚಿತ್ರ ತೆರೆ ಕಾಣಲಿರುವುದರಿಂದ ಚಿತ್ರತಂಡ ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದು ಸಿನಿಮಾ ಕುರಿತ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದೆ. ಬಿಡುಗಡೆ ಆಗಲಿರುವ ಸಿನಿಮಾಗೆ ರಾಜ್ಯದ ಜನತೆ ಚಿತ್ರಮಂದಿರಕ್ಕೆ ಬಂದು ವೀಕ್ಷಿಸುವ ಮೂಲಕ ಬೆಂಬಲಿಸಿ ಪ್ರೋತ್ಸಾಹಿಸಬೇಕು ಎಂದು ಮಾಧ್ಯಮಗಳ ಮೂಲಕ ಚಿತ್ರತಂಡ ಮನವಿ ಮಾಡಿಕೊಂಡಿತು.
ಈ ಹಿಂದಿನಿಂದಲೂ ಬೆಳಗಾವಿ-ಮಹಾರಾಷ್ಟ್ರ ಗಡಿ ಸಮಸ್ಯೆ ಇದೆ. ಆಗಾಗ ಮಹಾರಾಷ್ಟ್ರ ಜನತೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಗಡಿಕ್ಯಾತೆ ತೆಗೆಯುತ್ತಲೇ ಇರುತ್ತಾರೆ. ಆಗ ಕನ್ನಡಿಗರು ಬೆಳಗಾವಿ ನಮ್ಮದು ಎಂದು ಪ್ರತಿಭಟನೆ ನಡೆಸುತ್ತಾರೆ. ಹಲವು ದಶಕಗಳಿಂದಲೂ ಈ ಸಮಸ್ಯೆ ಇತ್ಯರ್ಥವಾಗಿಲ್ಲ. ಗಡಿನಾಡಿನ ಸಮಸ್ಯೆಯನ್ನು ತಿಳಿಸಲು, ಅದರಲ್ಲಿ ಪ್ರೀತಿಯ ಕಥೆ ಹೆಣೆದು ನಿರ್ದೇಶಕ ನಾಗ್ ಹುಣಸೋಡ್ ಚಿತ್ರ ತಯಾರಿಸಿದ್ದಾರೆ. ಎಲ್ಲ ಜನರಿಗೂ ಸಿನಿಮಾ ತಲುಪಲಿ ಎಂದು ರಾಜ್ಯದ ಹಲವೆಡೆ ಸುದ್ದಿಗೋಷ್ಠಿಗಳನ್ನು ನಡೆಸಿ ವ್ಯಾಪಕ ಪ್ರಚಾರಕ್ಕೂ ಪ್ರಯತ್ನ ನಡೆಸಿದ್ದಾರೆ.
‘ಒಳ್ಳೆಯ ಚಿತ್ರವೊಂದನ್ನು ಮಾಡಿದ್ದೇವೆ. ಪ್ರತಿಯೊಬ್ಬರೂ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹೊಸ ಪ್ರತಿಭೆಗಳು ಸೇರಿ ಸಿನಿಮಾ ಮಾಡಿದ್ದು, ಕೆಲ ಹಿರಿಯ ಕಲಾವಿದರು ಸಾಥ್ ನೀಡಿದ್ದಾರೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರು ಸಿನಿಮಾ ಕೂಡ ಮೆಚ್ಚುತ್ತಾರೆ ಎಂಬ ನಂಬಿಕೆ ಇದೆ’ ಎಂದು ನಿರ್ದೇಶಕ ನಾಗ್ ಹುಣಸೋಡ್ ಭರವಸೆ ವ್ಯಕ್ತಪಡಿಸುತ್ತಾರೆ. ನಟ ಪ್ರಭು ಸೂರ್ಯ, ನಟಿ ಸಂಚಿತಾ ಪಡುಕೋಣೆ ನಾಯಕ-ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಚರಣ್ರಾಜ್, ಶೋಭರಾಜ್, ದೀಪಕ್ ಶೆಟ್ಟಿ, ರಘುರಾಜು, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಘು ಸೀರುಂಡೆ, ಪುಷ್ಪಾ, ಮಮತಾ ಪ್ರಮುಖ ತಾರಾವರ್ಗದಲ್ಲಿದ್ದಾರೆ. ಚಿತ್ರಕ್ಕೆ ವಸಂತ್ ಮುರಾರಿ ಬಂಡವಾಳ ಹಾಕಿದ್ದು, ಎಲ್ವಿನ್ ಜೋಶ್ವಾ ಸಂಗೀತ ನೀಡಿದ್ದಾರೆ. ಗೌರಿ ವೆಂಕಟೇಶ್- ರವಿ ಸುವರ್ಣ ಛಾಯಾಗ್ರಹಣ, ವೆಂಕಿ ಸಂಕಲನ ಈ ಚಿತ್ರಕ್ಕಿದೆ.