ಗಡಾಯಿಕಲ್ಲಿನ ಒಂದು ಭಾಗದ ಚಪ್ಪಡಿ ಕುಸಿತ

ಬೆಳ್ತಂಗಡಿ/ಪುತ್ತೂರು: ಐತಿಹಾಸಿಕ ಪ್ರವಾಸಿ ತಾಣ, ಕುದುರೆಮುಖ ಪರ್ವತಶ್ರೇಣಿಗೆ ಅಂಟಿಕೊಂಡಿರುವ ಗಡಾಯಿಕಲ್ಲಿನ ಪೂರ್ವಭಾಗದಲ್ಲಿ ಕಲ್ಲು ಚಪ್ಪಡಿಯೊಂದು ಚೂರುಚೂರಾಗಿ ಜರಿದು ಬಿದ್ದಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಸಿಡಿಲಿಗೆ ಗಡಾಯಿಕಲ್ಲು ಬಿರುಕು ಬಿಟ್ಟಿದೆ ಎಂಬ ಸುದ್ದಿ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಶಾಸಕ ಹರೀಶ್ ಪೂಂಜ ಕಲ್ಲಿನ ಪೂರ್ವ ದಿಕ್ಕಿನ ಬುಡಕ್ಕೆ ಬಂದು ಪರಿಶೀಲಿಸಿದ್ದಾರೆ. 10ರಿಂದ 15 ಅಡಿ ಉದ್ದಕ್ಕೆ ಬಂಡೆಯ ಬೃಹತ್ ಚಪ್ಪಡಿಯೊಂದು ಚೂರಾಚೂರಾಗಿ ಕೆಳಗಿನ ಕಾಡಿನ ಭಾಗಕ್ಕೆ ಜಾರಿರುವುದು ಗೋಚರಿಸಿದೆ. ಸಿಡಿಲಾಘಾತಕ್ಕೆ ಈ ರೀತಿ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಬಿರುಕು ಬಿಟ್ಟ ಯಾವುದೇ ಕುರುಹುಗಳು ಗೋಚರಿಸಿಲ್ಲ ಎಂದು ತಿಳಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲಿಸಲು ಸೂಚಿಸಿದ್ದೇನೆ. ವನ್ಯ ಜೀವಿ ಇಲಾಖೆಯವರಿಗೂ ಭೇಟಿ ನೀಡುವಂತೆ ತಿಳಿಸಿದ್ದೇನೆ. ಅವರ ಅಧ್ಯಯನ ಬಳಿಕ ಇದು ಹೇಗಾಯಿತು ಎನ್ನುವುದು ಗೊತ್ತಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಭಾರಿ ಶಬ್ದ, ಧೂಳು: ಬೆಳಗ್ಗೆ 7 ಗಂಟೆಯ ಹೊತ್ತಿಗೆ ಧಡಧಡ ಶಬ್ದ ಕೇಳಿಬಂತು. ಹೊರಗೆ ಬಂದು ನೋಡಿದಾಗ ಮನೆಯೆದುರು ಇರುವ ಗಡಾಯಿಕಲ್ಲಿನಿಂದ ಕಲ್ಲಿನ ರಾಶಿಯೇ ಕೆಳಗೆ ಬೀಳುತ್ತಿರುವುದು ಗೋಚರಿಸಿತು. ಬಿದ್ದ ರಭಸಕ್ಕೆ ಕಲ್ಲಿನ ದಟ್ಟ ಧೂಳು ಆವರಿಸಿತ್ತು. ಕೆಲ ಹೊತ್ತು ಏನೂ ಕಾಣಿಸುತ್ತಿರಲಿಲ್ಲ. ಸುಮಾರು 1 ತಾಸು ಕಲ್ಲು ಸ್ವಲ್ಪಸ್ವಲ್ಪವಾಗಿ ಜರಿದು ಬೀಳುತ್ತಿತ್ತು. ಇದರಿಂದ ಆತಂಕಗೊಂಡಿದ್ದೆವು. ಕಳೆದ ವರ್ಷ ಕೂಡ ಸಿಡಿಲಾಘಾತಕ್ಕೆ ಕಲ್ಲೊಂದು ಒಡೆದು ಬಿದ್ದಿತ್ತಿಲ್ಲದೆ ಕಾಡಿಗೆ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಮಳೆ ಬಂದದ್ದರಿಂದ ಬೆಂಕಿ ನಂದಿ ಹೋಯಿತು. ಈ ಬಾರಿಯೂ ಸಿಡಿಲಾಘಾತಕ್ಕೆ ಹೀಗೆ ಆಗಿದೆ ಎನ್ನುತ್ತಾರೆ ಕಲ್ಲು ಕುಸಿದ ಭಾಗದ ಸಮೀಪ ಮನೆ ಹೊಂದಿರುವ ಬೇಲಾಜೆ ನಿವಾಸಿ ಮೌರಿಶ್ ಪಿಂಟೊ ಎಂಬುವರ ಪತ್ನಿ ಜುಲಿಯಾನ ಪಿಂಟೊ.
ನರಸಿಂಹಘಡ, ಜಮಲಾಬಾದ್ ಕೋಟೆ ಎಂದೆಲ್ಲ ಕರೆಯಲಾಗುವ ಗಡಾಯಿಕಲ್ಲು ಕುದುರೆಮುಖ ಪರ್ವತ ಶ್ರೇಣಿಗೆ ಅಂಟಿಕೊಂಡಿದ್ದು, ಸಮುದ್ರಮಟ್ಟದಿಂದ ಸುಮಾರು 1,700 ಅಡಿ ಎತ್ತರದಲ್ಲಿದೆ. ಇದಕ್ಕೆ ಸುಮಾರು 1,800 ಮೆಟ್ಟಿಲುಗಳಿವೆ.

ಪಾಚಿ ಜಾರಿರಬಹುದು
ಗಡಾಯಿಕಲ್ಲು ಸುತ್ತಮುತ್ತ ಬೃಹತ್ ಕಾಡುಪ್ರದೇಶ ಇರುವುದರಿಂದ ಹತ್ತಿರದಿಂದ ನೋಡುವುದು ಕಷ್ಟ. ದೂರದಿಂದ ನೋಡಿದಾಗ ಬೆಟ್ಟದಿಂದ ಕಲ್ಲಿನ ತುಂಡು ಬಿದ್ದಿರುವಂತೆ ಕಾಣುತ್ತದೆ. ಆದರೆ ಕೆಲ ಪ್ರವಾಸಿಗಳು, ಚಾರಣಿಗರು ಇದನ್ನು ನಿರಾಕರಿಸುತ್ತಾರೆ. ನಾವು ಪ್ರತೀ ವರ್ಷ ಗಡಾಯಿಕಲ್ಲಿನ ಮೇಲೆ ಹೋಗುತ್ತೇವೆ. ಮಳೆಗಾಲದಲ್ಲಿ ಕಂಡುಬರುವ ಪಾಚಿ ಕಲ್ಲಿಗೆ ದಪ್ಪವಾಗಿ ಅಂಟಿಕೊಂಡಿರುತ್ತದೆ. ಇದು ಬೇಸಿಗೆಯಲ್ಲಿ ಒಣಗಿ ಮಳೆಗಾಲ ಬರುವಾಗ ನೀರಿನಲ್ಲಿ ಒದ್ದೆಯಾಗಿ ಕಳಚಿ ಬೀಳುತ್ತದೆ. ಆಗ ಕಲ್ಲು ಸ್ವಚ್ಛವಾಗಿ ಕಾಣುತ್ತದೆ. ಇದು ಕಲ್ಲು ಜಾರಿದಂತೆ ಕಾಣುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು ಸಾಮಾನ್ಯ ಪ್ರಕ್ರಿಯೆ
ಬೆಟ್ಟದ ಇಳಿಜಾರು ಪ್ರದೇಶಗಳು ’್ಖ’ ಅಥವಾ ’ಖಿ’ ಆಕಾರದಲ್ಲಿರುತ್ತವೆ. ಮಳೆಗಾಲದ ಕೊನೆಯಲ್ಲಿ ಬಿರುಸು ಕಳೆದುಕೊಂಡ ಸಂದರ್ಭ ಮಳೆ ನೀರಿನ ಜತೆ ಹರಿದು ಬಂದ ಮಣ್ಣು ಮತ್ತು ತರಗೆಲೆ ಇಂಥ ಜಾಗಗಳಲ್ಲಿ ಸೇರಿಕೊಳ್ಳುತ್ತದೆ. ಕೆಲವು ತಿಂಗಳಲ್ಲಿ ಇದು ಬೆಟ್ಟದ ಭಾಗವಾಗಿಯೇ ಕಾಣುತ್ತದೆ. ಆದರೆ ಮಳೆಗಾಲ ಆರಂಭದ ಬಿರುಸಿನ ಮಳೆಗೆ ಇದು ಕೊಚ್ಚಿಕೊಂಡು ಹೋಗಿ ಬಂಡೆ ಮಾತ್ರ ಉಳಿಯುತ್ತದೆ. ಆಗ ಕಲ್ಲು ಜರಿದು ಬಿದ್ದಂತೆ ಕಾಣುವುದು ಸಹಜ. ಈಗ ಕಲ್ಲು ಕುಸಿದಿದೆ ಎಂದು ಹೇಳಲಾಗಿರುವ ಬೇಲಾಜೆಯಲ್ಲಿ ಕಲ್ಲು ಕಾಣುತ್ತಿಲ್ಲ, ಕೆಂಪಗೆ ಮಣ್ಣು ಕಾಣುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿ.

ಘಟನೆ ನಮ್ಮ ಗಮನಕ್ಕೆ ಬಂದಿದೆ. ಆದರೆ ಕಲ್ಲು ಜರಿದಿಲ್ಲ, ಇದು ಖಚಿತ. ಬಂಡೆಗಳ ಮೇಲೆ ಸೇರಿಕೊಂಡ ಮಣ್ಣು ಬೇಸಿಗೆಯಲ್ಲಿ ಗಟ್ಟಿಯಾಗುತ್ತದೆ, ಆದರೆ ಮಳೆ ಬರುತ್ತಿದ್ದಂತೆ ಅಡಿಯಲ್ಲಿ ಕರಗಿ ಜಾರುತ್ತದೆ. ಕೆಲದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಕಲ್ಲಿನ ಮೇಲಿನ ಮಣ್ಣು ಜಾರಿರಬಹುದು. ನಾವು ಪರಿಶೀಲಿಸುತ್ತೇವೆ.
– ರುದ್ರಣ್ಣ, ಡಿಎಫ್‌ಒ, ಕಾರ್ಕಳ ವಲಯ

ಪಶ್ಚಿಮಘಟ್ಟ ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಕಬ್ಬಿಣ, ಮ್ಯಾಂಗನೀಸ್ ಅದಿರು ಪ್ರಮಾಣ ಜಾಸ್ತಿ. ಗಡಾಯಿಕಲ್ಲಿನಲ್ಲೂ ಈ ಅಂಶಗಳಿವೆ. ಹಾಗಾಗಿ ಸಿಡಿಲು ಹೊಡೆಯುವುದು ಸಾಮಾನ್ಯ. ಆದರೆ ಸಿಡಿಲು ಹೊಡೆದು ಕಲ್ಲು ಜರಿಯುವುದಾದರೆ ಕೆಳಗಡೆ 1 ಕಿ.ಮೀ. ವ್ಯಾಪ್ತಿಯಲ್ಲಿ ಅದರ ಪರಿಣಾಮ ಗೋಚರಿಸಬೇಕಿತ್ತು.
– ಸೋಮಶೇಖರ ರೆಡ್ಡಿ, ನಿವೃತ್ತ ಭೂವಿಜ್ಞಾನಿ

Leave a Reply

Your email address will not be published. Required fields are marked *