ಮಹಿಳೆ ಬಿದ್ದು ಸತ್ತಿದ್ದಕ್ಕೆ ಕೆರೆ ನೀರು ಖಾಲಿ!

ಗದಗ: ಮನುಷ್ಯನ ಎಲ್ಲಾ ಮೈಲಿಗೆಯನ್ನು ತೊಳೆಯುವವಳು ಪಾವನ ಗಂಗೆ. ಆದರೆ, ಇಲ್ಲಿ ಗಂಗೆಯೇ ಮೈಲಿಗೆಯಾಗಿದ್ದಾಳೆ ಎಂಬ ಮೂಢನಂಬಿಕೆಗೆ ತುಂಬಿ ತುಳುಕುತ್ತಿದ್ದ ಕೆರೆಯು ಖಾಲಿಯಾಗುತ್ತಿದೆ.

ಉದಯವಾಗಲಿ ಚೆಲುವ ಕನ್ನಡನಾಡು ಗೀತೆ ಬರೆದ ಹುಯಿಲಗೋಳ ನಾರಾಯಣರಾವ್ ಅವರ ಹುಟ್ಟೂರಾದ ಹುಯಿಲಗೋಳಿನಲ್ಲಿ ಸುಮಾರು 20 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಇದೆ. ಇದು ಈ ಗ್ರಾಮದ ಜೀವನಾಡಿಯಾಗಿದ್ದು, ಜನರ ದಾಹವನ್ನು ತೀರಿಸುತ್ತೆ.

ಕಳೆದ ಮೂರು ದಿನಗಳ ಹಿಂದೆ ಮಾನಸಿಕ ಅಸ್ವಸ್ಥೆಯೊಬ್ಬರು ಕೆರೆಯಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದರು. ಆಕೆ ಬಿದ್ದು ಸಾಯುತ್ತಿದ್ದಂತೆ, ನೀರು ಮೈಲಿಗೆ ಆಗಿದೆ ಎಂದು ಇಡೀ ಗ್ರಾಮಸ್ತರು ನಂಬಿದ್ದಾರೆ. ಅಲ್ಲದೆ, ಕೆರೆಯಲ್ಲಿ 7 ಪಂಪ್‌ಸೆಟ್‌ಗಳನ್ನು ಬಳಸಿ ನೀರನ್ನು ಹೊರಗೆ ತೆಗೆಯುತ್ತಿದ್ದಾರೆ.

ಕಳೆದೆರೆಡು ದಿನಗಳಿಂದ 20 ಎಚ್‌.ಪಿ ಸಾಮರ್ಥ್ಯದ 7 ಮೋಟಾರ್‌ಗಳನ್ನ ಬಳಸಿ ನೀರನ್ನು ಹೊರಹಾಕಲಾಗುತ್ತಿದೆ. ಆದರೆ, 20 ಎಕರೆ ವಿಸ್ತಿರ್ಣ, ಅಂದಾಜು 23 ಅಡಿ ಆಳ ಇರುವ ಕೆರೆ ನೀರನ್ನು ಸಂಪೂರ್ಣ ಹೊರ ಹಾಕಬೇಕಾದರೆ ಸುಮಾರು 20 ದಿನಗಳೇ ಕಳೆಯುತ್ತವೆ.

ಅಂದಹಾಗೆ ಈ ಕೆರೆ ನೀರನ್ನು ಗ್ರಾಮಸ್ತರು ಕುಡಿಯಲು ಬಳಸುತ್ತಿದ್ದರು. ಹೀಗಾಗಿ ಕೆರೆ ಹಾಗೂ ಸುತ್ತುಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಟ್ಟುಕೊಂಡಿದ್ದರು. ಆದರೆ, ಕೆರೆ ಖಾಲಿಯಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಮಳೆ ಬಾರದೆ ಕೆರೆ ತುಂಬದಿದ್ದರೆ, ಮುಂದೆ ಕುಡಿಯುವ ನೀರಿಗೂ ಆಹಾಕಾರ ಉಂಟಾಗಲಿದೆ. (ದಿಗ್ವಿಜಯ ನ್ಯೂಸ್​)