ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ ಮಾಡಲಾಯಿತು.
ಶಾಲೆಯ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ ರವರು ವೀರವನಿತೆ ಒನಕೆ ಓಬವ್ವ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ, ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದು, ಅವರನ್ನು ಕರ್ನಾಟಕದ ವೀರ ವನಿತೆಯರಾದ ಕಿತ್ತೂರ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕದೇವಿ ಹಾಗೂ ಕೆಳದಿ ಚೆನ್ನಮ್ಮರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಓಬವ್ವರನ್ನು ಕನ್ನಡದ ಹೆಣ್ಣಿನ ಅಭಿಮಾನದ ಪ್ರತಿರೂಪವೆಂದು ಪರಿಗಣಿಸಲಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ವೀರ ವನಿತೆ ಒನೆಕೆ ಓಬವ್ವ ಅವರು ಸ್ವಾಮಿನಿಷ್ಠೆ ಹಾಗೂ ಸಮಯಪ್ರಜ್ಞೆಯ ಮೂಲಕ ಚಿತ್ರದುರ್ಗದ ಕೋಟೆ ರಕ್ಷಣೆಗೆ ತೋರಿದ ಧೈರ್ಯ ಸಾಹಸ ಸ್ಮರಣೀಯವಾಗಿದೆ. ಸಾಮಾನ್ಯ ಗ್ರಹಿಣಿ ಎನಿಸಿಕೊಂಡಿದ್ದ ಒನಕೆ ಓಬವ್ವ ಇತಿಹಾಸದ ಪುಟಗಳಲ್ಲಿ ಆವರಿಸಿಕೊಂಡಿದ್ದೆ ರೋಮಾಂಚಕ ಕಥನವಾಗಿದೆ. ಒನಕೆ ಓಬವ್ವಳು ಸ್ವಾಮಿ ನಿಷ್ಠೆ, ಸಮಯ ಸ್ಪೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮವಾಗಿದ್ದಾರೆ. ಚಿತ್ರದುರ್ಗದ ಕೋಟೆಯ ಮುತ್ತಿಗೆಗೆ ಯತ್ನಿಸಿದ ಹೈದರ್ ಅಲಿಯ ಕುತಂತ್ರವನ್ನು ವಿಫಲಗೊಳಿಸಿ ಕೋಟೆ ಮತ್ತು ಪ್ರಜೆಗಳನ್ನು ಅಪಾಯದಿಂದ ಪಾರು ಮಾಡಿದವರು ವೀರ ವನಿತೆ ಓಬವ್ವ, ಅವರು ನಾರಿ ಶಕ್ತಿಯ ಪ್ರತೀಕವಾಗಿ ಕನ್ನಡ ನಾಡಿನ ಜನತೆಗೆ ಸ್ಪೂರ್ತಿಯಾಗಿದ್ದಾರೆ, ಅವರಲ್ಲಿರುವ ಧೈರ್ಯ ಹಾಗೂ ಸಾಹಸ ಗುಣಗಳೊಂದಿಗೆ ಆದರ್ಶಮಯವಾದಂತಹ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತನುಶ್ರಿ ಹಾದಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕಿಯರಾದ ಕು. ಗಾಯತ್ರಿ ಅಸುಂಡಿ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಮಸ್ತ ಶಿಕ್ಷಕ/ ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
TAGGED:*ಗದಗ