ಗದಗ: ಕರೊನಾ ತಡೆಗಟ್ಟಲು ಲಾಕ್ಡೌನ್ ಹೇರಿರುವ ಸಮಯದಲ್ಲಿ ಬಹುತೇಕ ಮಂದಿ ಟಿಕ್ಟಾಕ್ ಮೊರೆ ಹೋಗಿರುವುದು ಸುಳ್ಳಲ್ಲ. ಮನರಂಜನೆಯ ರಸದೌತಣ ನೀಡುವ ಟಿಕ್ಟಾಕ್ ಕೆಲ ಸಮಯದಲ್ಲಿ ಅಷ್ಟೇ ಅಪಾಯಕಾರಿ ಎಂಬುದನ್ನು ನಿರೂಪಿಸಿದೆ. ಟಿಕ್ಟಾಕ್ ಗೀಳಿಗೆ ಬಿದ್ದು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಂತಹ ಉದಾಹರಣೆಗಳಿವೆ. ಇದೀಗ ಆ ಸಾಲಿಗೆ ಗದಗಿನಲ್ಲಿ ನಡೆದ ಪ್ರಕರಣವೊಂದು ಸೇರಿಕೊಂಡಿದೆ.
ಪ್ರಕಾಶ್(26) ಎಂಬ ಯುವಕನೊರ್ವ ನೇಣು ಹಾಕಿದ ಹಾಗೆ ನಟಿಸಿ, ಟಿಕ್ಟಾಕ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಎದುರಿಗೆ ಇರುವ ಕಿಟಕಿಯ ಮೇಲೆ ತನ್ನ ಮೊಬೈಲ್ ಇಟ್ಟು ಟಿಕ್ಟಾಕ್ ವಿಡಿಯೋ ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ವಿಧಿಯಾಟ ಏನಿತ್ತೋ? ದುರಾದೃಷ್ಟದಿಂದ ಅದೇ ಕುಣಿಕೆಯಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ.
ಗದಗ ತಾಲೂಕಿನ ನರಸಾಪೂರ ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಘಟನೆ ನಡೆದಿದೆ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್, ಟಿಕ್ಟಾಕ್ ಹುಚ್ಚಾಟದಿಂದಾಗಿ ಇದೀಗ ಜೀವವನ್ನು ಕಳೆದುಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.