ಸಾವಿನ ಮನೆಯಲ್ಲಿ ಕಪಿರಾಯನ ಸಾಂತ್ವನ!

ನರಗುಂದ: ಮನುಷ್ಯ ಮರಣ ಹೊಂದಿದಾಗ ಬಂಧು- ಮಿತ್ರರೇ ಬೇಗ ಬರುವುದಿಲ್ಲ. ಆದರೆ, ಕೋತಿಯೊಂದು ಸಾವಿನ ಮನೆಗೆ ತೆರಳಿ ಮೃತರ ಹಿರಿಯ ಮಗನ ತಲೆ ಮೇಲೆ ಕೈಯಾಡಿಸಿ ತನ್ನದೇ ಭಾಷೆಯಲ್ಲಿ ಸಾಂತ್ವನ ಹೇಳಿದ ಪ್ರಸಂಗ ಪಟ್ಟಣದ ಅರ್ಭಾಣ ಬಡಾವಣೆಯಲ್ಲಿ ನಡೆದಿದೆ.

ನಾಗನಗೌಡ ಪಾಟೀಲ (71) ಮಂಗಳವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಕುಟುಂಬದವರು ಅತೀವ ಶೋಕದಲ್ಲಿದ್ದರು. ಅಷ್ಟರಲ್ಲಿ ಮಂಗವೊಂದು ಮೃತರ ಮನೆಗೆ ಧಾವಿಸಿ, ಅರ್ಚಕರು ಪೂಜೆ ಸಲ್ಲಿಸುವಾಗ ಸುಮ್ಮನೆ ಕುಳಿತು ಶ್ರದ್ಧಾಂಜಲಿ ಸಲ್ಲಿಸಿದೆ. ಮನೆಯಿಂದ ಹೊರಬಂದು ಮೃತರ ಹಿರಿಯ ಪುತ್ರ ಮರಿಗೌಡ ಅವರ ಹೆಗಲ ಮೇಲೆ ಕುಳಿತು ಕಿವಿಯಲ್ಲಿ ತನ್ನದೇ ಭಾಷೆಯಲ್ಲಿ ಸಾಂತ್ವನ ಹೇಳಿದ್ದಲ್ಲದೆ, ಪದೇಪದೆ ತಲೆ ಮೇಲೆ ಕೈಯಾಡಿಸಿ ಮರಿಗೌಡರನ್ನು ಸಂತೈಸಿತ್ತು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಯಾರೊಬ್ಬರಿಗೂ ತೊಂದರೆ ಮಾಡದೆ ಕುಟುಂಬಸ್ಥರಿಗೆ ಪ್ರೀತಿ ಕನಿಕರ ತೋರಿಸಿದ ಕಪಿರಾಯನ ವರ್ತನೆ ಸಾರ್ವಜನಿಕರನ್ನು ನಿಬ್ಬೆರಗಾಗಿಸಿದೆ.