More

  ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ಕಿಡಿ: ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಮಾಡುವಂತೆ ಆಗ್ರಹ

  ಗದಗ: ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿ ಗದಗ ಜಿಲ್ಲಾ ಜೆಡಿಎಸ್‌ ವತಿಯಿಂದ ಮಂಗಳವಾರ ವಿನೂತನ ರೀತಿಯ ಪ್ರತಿಭಟನೆ ನಡೆಯಿತು.

  ನಗರದ ಗಾಂಧಿವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ‘ನನ್ನ ತೆರಿಗೆ ನನ್ನ ಹಕ್ಕು’ ಎಂದು ಘೋಷಣೆ ಕೂಗುತ್ತ ತಹಶೀಲ್ದಾರ್‌ ಕಚೇರಿವರೆಗೆ ಹಿಮ್ಮುಖವಾಗಿ ಚಲಿಸಿದರು. ನಡಿಗೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

  ಜೆಡಿಎಸ್‌ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ‘ರಾಜ್ಯ ಸರ್ಕಾರ ಹೇಳುವುದುದೊಂದು ಮಾಡುವುದೊಂದು ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಕೇಂದ್ರ ಸರ್ಕಾರ ತೆರಿಗೆ ಪಾಲನ್ನು ಸಮಾನವಾಗಿ ಹಂಚಿಕೆ ಮಾಡುತ್ತಿಲ್ಲ ಎಂದು ಆರೋಪಿಸುವ ರಾಜ್ಯ ಸರ್ಕಾರ; ನಮ್ಮ ಜಿಲ್ಲೆಯಿಂದ ಪ್ರತಿವರ್ಷ ₹500 ಕೋಟಿ ತೆರಿಗೆ ಪಡೆಯುತ್ತದೆ. ಆದರೆ, ಈ ಬಾರಿಯ ಬಜೆಟ್‌ನಲ್ಲಿ ಕೇವಲ ₹20 ಕೋಟಿ ಹಣವನ್ನು ಮಾತ್ರ ಜಿಲ್ಲೆಗೆ ನೀಡಿದೆ. ಇದು ಅನ್ಯಾಯ’ ಎಂದು ಕಿಡಿಕಾರಿದರು.

  ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿವೆ. ಆದರೆ, ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಬಸ್‌ ವ್ಯವಸ್ಥೆಯನ್ನು ಸರ್ಕಾರ ಈವರೆಗೆ ಮಾಡಿಲ್ಲ. ಮಾರ್ಚ್‌, ಏಪ್ರಿಲ್‌ ಮದುವೆ ಋತು ಆಗಿರುವುದರಿಂದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುವ ಸಂಭವ ಇದೆ. ಆದಕಾರಣ, ಪರೀಕ್ಷೆ ಬರೆಯವ ವಿದ್ಯಾರ್ಥಿಗಳಿಗಾಗಿಯೇ, ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

  ಗದಗ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಬಳಿಕ ಗದಗ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

  ಜೆಡಿಎಸ್‌ ಮುಖಂಡರಾದ ಎಂ.ಎಸ್‌.ಪರ್ವತಗೌಡ್ರ, ಬಸವರಾಜ ಅಪ್ಪಣ್ಣವರ, ಪ್ರಫುಲ್‌ ಪುಣೇಕರ, ದೇವಪ್ಪ ಮಲ್ಲಸಮುದ್ರ, ಮುಕ್ತುಂಸಾಬ್‌ ಮುಧೋಳ, ಹಾಜಿಅಲಿ ಕೊಪ್ಪಳ, ಲಕ್ಷ್ಮಣ ನಾಯಕ, ವೀರಪ್ಪ ಜಿರ್ಲಿ, ವೀರಣ್ಣ ಬಾಳಿಕಾಯಿ, ಶರಣಪ್ಪ ಹೂಗಾರ, ಅಂಬರೀಶ ಅಂಗಡಿ, ಕುಮಾರ ಜಿಗಳೂರ, ಶರಣಪ್ಪ ನಾಗೂರ, ಶ್ರೀನಿವಾಸ ಮಾನೆ, ಹನಮಂತ ಸಿಗೆನಳ್ಳಿ, ರಾಜೇಸಾಬ ತಹಶೀಲ್ದಾರ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts