ಗದಗ: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಅಪರಾಧಿಗೆ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ, 2.35 ಲಕ್ಷ ರೂ. ದಂಡ ಹಾಗೂ ಸಂತ್ರಸ್ತ ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.
2021ರ ಅಕ್ಟೋಬರ್ 23ರಂದು ಅಪ್ರಾಪ್ತೆ ಮನೆಯಲ್ಲಿ ಒಬ್ಬಳೇ ಇದ್ದಾಗ, ಅಸುಂಡಿ ಗ್ರಾಮದ ರವಿ ಮಾದಾರ, ಬಾಲಕಿ ಮನೆಗೆ ನುಗ್ಗಿ ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆದರೆ, ಆಕೆ ಮೂರ್ಛೆ ಹೋಗಿದ್ದಾಳೆ ಎಂದು ಭಾವಿಸಿದ ಕಾಮುಕ, ಶವವನ್ನು ಮನೆ ಪಕ್ಕದ ಶೆಡ್ಗೆ ತೆಗೆದುಕೊಂಡು ಹೋಗಿ, ಅಲ್ಲಿಯೂ ಅತ್ಯಾಚಾರ ಮಾಡಿರುವುದು ತನಿಖೆಯಿಂದ ಸ್ಪಷ್ಟವಾಗಿದೆ.
ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ದೇಹದ ಮೇಲೆ ಗೊಬ್ಬರದ ಚೀಲವನ್ನು ಮುಚ್ಚಿರುವ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರ ಶೆಟ್ಟಿ ಅವರಿದ್ದ ಪೀಠ, ವಾದ-ಪ್ರತಿವಾದ ಆಲಿಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ನ್ಯಾಯಾಲಯವು ಬಾಲಕಿಯ ಕುಟುಂಬಕ್ಕೆ ಕಾನೂನು ಪ್ರಾಧಿಕಾರದ ಮೂಲಕ ರೂ. 10 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ. ಅಲ್ಲದೆ, ಆರೋಪಿಯು ವಿಧಿಸಲಾದ ದಂಡದ ಹಣವನ್ನು ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 3 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಕೋರ್ಟ್ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.
