ಗಾಂಧೀಜಿ ಹೆಸರು ಹೇಳಬೇಕೆಂದರೆ ಕಾಂಗ್ರೆಸ್ ವಿಸರ್ಜನೆ ಆಗಬೇಕು: ಬಸವರಾಜ ಬೊಮ್ಮಾಯಿ

ಗದಗ: ಕಾಂಗ್ರೆಸ್ ನವರು ಅಂಬೇಡ್ಕರ್ ಅವರಿಗೆ ಮಾಡಿರುವ ಅನ್ಯಾಯ, ಅಪಚಾರಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಇಂದು ಗದಗ ಶಹರದ ವಿಠ್ಠಲಾರೂಢ ಸಭಾ ಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಗದಗ ಹಾಗೂ ಭಾರತೀಯ ಜನತಾ ಪಾರ್ಟಿ ಗದಗ ಇವರ ವತಿಯಿಂದ ಏರ್ಪಡಿಸಿದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಸಂವಿಧಾನ ರಚನೆಯಾಗಿ 75 ವರ್ಷ ಆಗಿದೆ. ಅದರ ಪರ ಮತ್ತು ವಿರೋಧ ಯಾರಿದ್ದಾರೆ ಅಂತ ಚರ್ಚೆ ನಡೆಯುತ್ತಿದೆ. ಸಂವಿಧಾನ ರಚನೆಯ ನಂತರ ಕಾಂಗ್ರೆಸ್ ನವರು ಆಡಳಿತ ಶುರು ಮಾಡಿ ಸಂವಿಧಾನಕ್ಕೆ ಅಪಚಾರ ಮಾಡಿರುವುದು ಚರ್ಚಾ ವಿಷಯವಾಗಿದೆ. ಇಡಿ ಜಗತ್ತಿನಲ್ಲಿ ಶ್ರೇಷ್ಠವಾಗಿರುವ ಸಂವಿಧಾನ, ಜೀವಂತವಾಗಿರುವ, ಜನರಿಗೆ ಸ್ಪಂದಿಸುವ ಸಂವಿಧಾನ ಯಾವುದಾದರೂ ಇದ್ದರೆ ಅದು ಭಾರತದ ಸಂವಿಧಾನ.  ಜಗತ್ತಿನಲ್ಲಿ ಹಲವಾರು ವಿಧಾನದ ಪ್ರಜಾಪ್ರಭುತ್ವ ಇವೆ. ಭಾರತದೊಂದಿಗೆ 1947 ರಲ್ಲಿ ಬ್ರಿಟೀಷ್ ವಸಾಹತು ದೇಶಗಳಲ್ಲಿ 19 ದೇಶಗಳು ಸ್ವಾತಂತ್ರ್ಯ ಪಡೆದವು, ಆದರೆ, ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವ ಇದೆ. ಇಲ್ಲಿ ಮಾತ್ರ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಇದೆ. ಎಲ್ಲ ರೀತಿಯ ಮಾನವ ಹಕ್ಕುಗಳು, ಇಲ್ಲಿ ಸಮಾನತೆ ಇದೆ ಅಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಕಾರಣ. ಅಂಬೇಡ್ಕರ್ ಅವರು ಅಪಮಾನ ಸಹಿಸಿಕೊಂಡರು, ಅವರ ವಿದ್ಯಾಭ್ಯಾಸಕ್ಕೆ ಸಾಕಷ್ಟು ಜನ ಸಹಾಯ ಮಾಡಿದರು. ಅಂಬೇಡ್ಕರ್ ಅವರು ಬ್ಯಾರಿಸ್ಟರ್ ಆಗಿ ಮುಂಬೈಗೆ ಬಂದಾಗ ಕಾಂಗ್ರೆಸ್ ಬೆಂಬಲಿತ ಬಾರ್ ಅಸೋಸಿಯೇಷನ್ ನವರು ಅವರಿಗೆ ಸದಸ್ಯತ್ವ ಕೊಡಲಿಲ್ಲ ಎಂದು ಆರೋಪಿಸಿದರು.
 ಈ ದೇಶದ ಪರಂಪರೆ, ಆದ್ಯಾತ್ಮಿಕ ಚಿಂತನೆ, ಸಂಸ್ಕೃತಿ ಸಂಸ್ಕಾರ ಅವರ ಮೇಲೆ ಪರಿಣಾಮ ಬೀರಿದೆ. ಆಗ ಅವರಿಗೆ ಸಹಾಯಕ್ಕೆ ಬಂದವರು ಹುಬ್ಬಳ್ಳಿಯ ಸರ್ ಸಿದ್ದಪ್ಪ ಕಂಬಳಿಯವರು ಸಹಾಯಕ ಪ್ರಾಧ್ಯಾಪಕ ಹುದ್ದೆ ನೀಡಿದರು. ಆ ಸಂದರ್ಭ ದಲ್ಲಿ ಅವರು ಬಸವಣ್ಣನವರ ಬಗ್ಗೆ ಓದುವ ಅವಕಾಶ ಸಿಕ್ಕಿತು. ಅದರ ಪರಿಣಾಮ ಬಸವಣ್ಣನವರ ಸಮಾನತೆ ಚಿಂತನೆ, ಕನಕದಾಸರ ಕುಲಕುಲ ಎಂದು ಹೊಡೆದಾಡಬೇಡಿ ಎನ್ನುವ ಮಾತು, ಜ್ಯಾತ್ಯಾತೀತ ಸಮಾಜ ನಿರ್ಮಾಣ ಇವೆಲ್ಲ ಸಂವಿಧಾನದಲ್ಲಿ ನೋಡುತ್ತೇವೆ. ಬಣ್ಣ, ಆಕಾರ, ಜಾತಿಯಿಂದ, ಪ್ರದೇಶದಿಂದ ಮೇಲು ಕೀಳು ಮಾಡಬಾರದು, ಹೆಣ್ಣುಮಕ್ಕಳನ್ನು ಸಮಾನವಾಗಿ ಕಾಣಬೇಕು ಎಂದು ಹೇಳುತ್ತಾರೆ.
ಕನಕದಾಸರ ರಾಮಧಾನ್ಯ ಚರಿತೆಯಲ್ಲಿ ರಾಗಿ ಮತ್ತು ಅಕ್ಕಿಗೆ ಹೋಲಿಕೆ ಮಾಡಿ ಸಮಾಜದಲ್ಲಿ ಸಮಾನತೆ ಬಗ್ಗೆ ಹೇಳಿದ್ದಾರೆ. ಅದೆಲ್ಲ ಅಂಶ ನಮ್ಮ ಸಂವಿಧಾನದಲ್ಲಿದೆ. ನಾವೆಲ್ಲ ಕಾನೂನಾತ್ಮಕ ಆಡಳಿತ ಮಾಡಬೇಕೆಂದು ಹೇಳುತ್ತೇವೆ. ಕಾನೂನಿನ ಅಡಿ ಎಲ್ಲರು ಸಮಾನರು. ಬ್ರಾತೃತ್ವ, ಸೌಹಾರ್ದತೆ, ಏಕತೆ, ಅಖಂಡತೆ ಇವೆಲ್ಲ ಸಂವಿಧಾನದಲ್ಲಿದೆ. ಇದರ ವಿರುದ್ದ ಕಾಂಗ್ರೆಸ್ ಇದೆ. ಸ್ವಾತಂತ್ರ್ಯ ಬಂದ ಕೂಡಲೇ ಕಾಂಗ್ರೆಸ್ ದೇಶವನ್ನು ಇಬ್ಬಾಗ ಮಾಡಿತು.ಸಮಾನತೆ ಎಂದರೆ ಸಾಮಾಜಿಕ, ಆರ್ಥಿಕ ಸಮಾನತೆ ಇರಬೇಕೆಂದು ಸಂವಿಧಾನದಲ್ಲಿ ಹೇಳಿದೆ. ಕಾಂಗ್ರೆಸ್ ನವರು ಆರ್ಥಿಕ ಅಸಮಾನತೆ ಉಂಟು ಮಾಡಿದರು. ಗರೀಬಿ ಹಠಾವೊ ಅಂದರು, ಗರೀಬರನ್ನೇ ಹಠಾವೋ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಆರ್ಥಿಕ ಸಮಾನತೆ ನೀಡಲಿಲ್ಲ ಎಂದರು.
*ಕಾಂಗ್ರೆಸ್ ವಿಸರ್ಜಿಸಬೇಕು*
ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟ ಮಾಡುತ್ತ ಹೊರಟಿದ್ದರು. 1924 ರಲ್ಲಿ ಅವರನ್ನು ಕರೆದುಕೊಂಡು ಬಂದು ಬೆಳಗಾವಿ ಅಧಿವೇಶನದ ಅಧ್ಯಕ್ಷರನ್ನಾಗಿ ಮಾಡಿದರು. ಕಾಂಗ್ರೆಸ್ ನವರು ಜೈಬಾಪು ಅಂತ ಹೇಳುತ್ತಿದ್ದಾರೆ. ಗಾಂಧೀಜಿ ಹೆಸರು ಹೇಳಬೇಕೆಂದರೆ ಕಾಂಗ್ರೆಸ್ ವಿಸರ್ಜನೆ ಆಗಬೇಕು. ಗಾಂಧೀಜಿ ಕೂಡ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು. ಕಾಂಗ್ರೆಸ್ ನವರು ಅಂಬೇಡ್ಕರ್ ಅವರಿಗೆ ಮಾಡಿರುವ ಅನ್ಯಾಯ, ಅಪಚಾರಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಎಸ್ಸಿ ಎಸ್ಟಿಗೆ ಮೀಸಲಿಟ್ಟಿದ್ದ ಹಣವನ್ನು ಲೂಟಿ ಮಾಡಿದವರು ಕಾಂಗ್ರೆಸ್ ನವರು, ವಾಲ್ಮೀಕಿ ನಿಗಮದಲ್ಲಿ ಇಷ್ಟು ದೊಡ್ಡ ಹಗರಣ ಆಯಿತು ಯಾರಿಗೂ ಶಿಕ್ಷೆಯಾಗಲಿಲ್ಲ. ಎಸ್ಸಿ ಎಸ್ಟಿ ಹಣವನ್ನು ಲೂಟಿ ಮಾಡಿದ್ದಾರೆ. ನಿಜವಾಗಲೂ ಎಸ್ಸಿ ಎಸ್ಟಿಗೆ ಅನ್ಯಾಯ ಮಾಡಿದ್ದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಮುಸ್ಲೀಂ ಮಹಿಳೆಯರಿಗೆ ಜೀವನಾಂಶ ಕೊಡಬೇಕು ಎಂದು ಹೇಳಿತ್ತು. ಆದರೆ, ಮುಸ್ಲೀಂ ಧರ್ಮಗುರುಗಳು ಶರಿಯತ್  ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಶರಿಯತ್ ಕಾನೂನಿಗೆ ಮಾನ್ಯತೆ ನೀಡಿದರು. ಅವರು ಸಂವಿಧಾನಕ್ಕೆ ಅಪಮಾನ ಮಾಡಿದರು ಎಂದು ಹೇಳಿದರು.
*ಸಂವಿಧಾನ ಧರ್ಮಗ್ರಂಥ*
ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ನನ್ನ ಧರ್ಮ ಗ್ರಂಥ ಅಂತ ಹೇಳಿದರು. ಅವರು  ಬಿಜೆಪಿಯವರು ಸಂವಿಧಾನ ತಿದ್ದುಪಡಿ ಮಾಡಿದ್ದೇವೆ.  ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಲು 370 ವಿಧಿ ರದ್ದು ಮಾಡಲು ಸಂವಿಧಾನ ತಿದ್ದುಪಡಿ ಮಾಡಿದ್ದೇವೆ. ವಾಜಪೇಯಿಯವರು  ಎಸ್ಸಿ ಎಸ್ಟಿ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಒಬಿಸಿ ಆಯೋಗಕ್ಕೆ ಸಂವಿಧಾನ ಮಾನ್ಯತೆ ನೀಡಲು ತಿದ್ದುಪಡಿ ಮಾಡಿದ್ದಾರೆ. ಕಾಂಗ್ರೆಸ್ ನವರು ಸ್ವಾರ್ಥಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿದರು. ಜನರ ಹಕ್ಕುಗಳನ್ನು ಕಿತ್ತು ಹಾಕಿದರು. ಯಾರೂ ಕೂಡ ಸರ್ಕಾರದ ವಿರುದ್ದ ಮಾತನಾಡದಂತೆ ತುರ್ತು ಪರಿಸ್ಥಿತಿ ತಂದರು, ಒಂದು ಲಕ್ಷ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ‌ ಹಾಕಿದರು. ಪೊಲೀಸ್ ರಾಜ್ಯ ತಂದರು. ಇಂದಿನ ಕರ್ನಾಟಕದಲ್ಲಿಯೂ ಪೊಲಿಸ್ ರಾಜ್ಯ ಇದೆ. ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಿದೆ. ಅದನ್ನು ನಾವು ಮಾಡೇ ಮಾಡುತ್ತೇವೆ ಎಂದು ಹೇಳಿದರು.
 ಈ ಸಂಧರ್ಭದಲ್ಲಿ ಶಾಸಕರಾದ  ಸಿ.ಸಿ. ಪಾಟೀಲ್, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಮಾಜಿ ಶಾಸಕರಾದ  ಪಿ. ರಾಜೀವ,  ಕಳಕಪ್ಪ ಬಂಡಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ರಾಜು ಕುರಡಗಿ, ಎಸ್. ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ  ಮಂಜುನಾಥ ಮುಳಗುಂದ, ಮುಖಂಡರಾದ  ರವಿ ದಂಡಿನ, ಶ್ರೀ‌ ಮಹೀಂದ್ರ ಕೌತಾಳ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
TAGGED:
Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…

ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ?; ಈ ತರಕಾರಿಗಳಿಂದ ತೊಂದರೆ ನಿವಾರಣೆ ಗ್ಯಾರಂಟಿ | Health Tips

ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕರುಳುಗಳು ಸರಿಯಾಗಿ…

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಉತ್ತಮ ಮದ್ದು ತೆಂಗಿನ ಎಣ್ಣೆ; ಈ ಬಗ್ಗೆ ತಜ್ಞರು ಹೇಳೋದೇನು | Health Tips

ಗರ್ಭಾವಸ್ಥೆಯಲ್ಲಿ ಹಿಗ್ಗಿಸಲಾದ ಗುರುತುಗಳು ಇರುವುದು ಸಹಜ. ಕೆಲವೊಮ್ಮೆ ಈ ಗುರುತುಗಳು ತಾವಾಗಿಯೇ ಮಾಯವಾಗುತ್ತವೆ ಮತ್ತು ಕೆಲವೊಮ್ಮೆ…