ಕೇಂದ್ರದಲ್ಲಿ ವಕ್ಫ ಕಾಯಿದೆ ತಿದ್ದುಪಡಿ ಖಚಿತತೆ ಹಿನ್ನೆಲೆ ಕಾಂಗ್ರೆಸ್ಸಿನಿಂದ ರಾಜ್ಯದಲ್ಲಿ ಹುನ್ನಾರ: ಎಸ್. ವಿ. ಸಂಕನೂರು
ವಿಜಯವಾಣಿ ಸುದ್ದಿಜಾಲ ಗದಗ
ವಕ್ಫ ಬೋರ್ಡ್ನಿಂದ ಮುಸ್ಲಿಂ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಮತ್ತು ದೇಶದ ಜನರ ಹಿತದೃಷ್ಟಿಯಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂಬರುವ ಅಧಿವೇಶನದಲ್ಲಿ ವಕ್ಫ ಕಾಯಿದೆಗೆ ತಿದ್ದುಪಡಿ ತರುವುದು ಖಚಿತವಾಗಿದೆ. ಈ ಖಚಿತತೆ ಅರಿತ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತನ್ನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದು, ವಕ್ಫ ಬೋರ್ಡ್ ಮೂಲಕ ರಾಜ್ಯದ ಜನರ, ರೈತರ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರು ಆರೋಪಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಈ ಎಲ್ಲ ಕೃತ್ಯಗಳ ಹಿಂದೆ ಸಚಿವ ಜಮ್ಮೀರ ಅಹಮ್ಮದ ಅವರ ಕೈವಾಡವಿದೆ. ಅವರನ್ನು ಸಚಿವ ಸಂಪುಟದಿಂದ ಮೊದಲ ಕೈಬಿಡಬೇಕು. ರಾಜ್ಯದ ಜನರ ಆತಂಕ್ಕೆ ಅವರೇ ನೇರ ಹೊಣೆ. ವಿಜಯಪುರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದ ರೈತರು ಭಯದಲ್ಲಿ ಇದ್ದಾರೆ. ರಾಜ್ಯದ ಶಕ್ತಿ ಕೇಂದ್ರ ವಿಧಾನಸವಧವು ವಕ್ಫ ಆಸ್ತಿ ಎಂದು ಮುಸ್ಲಿಂ ನಾಯಕರು ಹೇಳುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 1649 ಪ್ರಕರಣದಲ್ಲಿ ವಕ್ಫ ಆಸ್ತಿಗಾಗಿ ಪ್ರತಿಪಾಧಿಸುತ್ತಿದೆ. ಸವಣೂರು ತಾಲೂಕಿನ ಕಡಕೋಳ ಗ್ರಾಪಂ ವ್ಯಾಪ್ತಿಯ ಹನುಮಂತ ದೇವಸ್ಥಾನ ಅತೀಕ್ರಮಕ್ಕೆ ವಕ್ಫ ಮುಂದಾಗಿದೆ. ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣ ಪಂಚಾಯಿತಿ ವಕ್ಫ ಆಸ್ತಿ ಎಂದು ಪ್ರತಿಪಾದಿಸುತ್ತಿದೆ. ಇಂತಹ ಆಸ್ತಿಗಳನ್ನು ವಕ್ಫ ಆಸ್ತಿ ಎಂದು ಪ್ರತಿಪಾದಿಸಿದರೇ ಕೋಮು ಗಲಭೆಗಳು ಆರಂಭವಾಗುತ್ತವೆ. ಈಗಾಗಲೇ ರಾಜ್ಯದಲ್ಲಿ ಇಂತಹ ಸಂಧಿಗ್ದ ಸ್ಥಿತಿ ನಿರ್ಮಾಣವಾಗಲು ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ವಕ್ಫ ಬೋರ್ಡ್ನಿಂದ ಆಗುತ್ತಿರುವ ಈ ರೀತಿಯ ಗೊಂದಲಗಳಿಂದ ರಾಜ್ಯದಲ್ಲಿ ಸಾಮರಸ್ಯ ಹದಗೆಡುತ್ತಿದೆ. ಸರ್ಕಾರ ವಿವೇಚನೆ ಇಲ್ಲದೇ ಕೈಗೊಳ್ಳುತ್ತಿರುವ ಇಂತಹ ನಿರ್ಧಾರಗಳಿಂದ ಹಲವು ವ್ಯಾಜ್ಯಗಳು ಬೀದಿಗೆ ಬರುತ್ತಿವೆ. ಕಡಕೋಳ ಗ್ರಾಮದಲ್ಲಿ ಈಗಾಗಲೇ ಕೋಮು ಸಂರ್ಷ ಆರಂಭವಾಗಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಓಲೈಕೆಗಾಗಿ ಸಂರ್ಪೂಣವಾಗಿ ರೈತರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಆಗುವ ಅನಾಹುತಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ವಕ್ಫ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಚುನಾವಣೆ ತಂತ್ರಗಾರಿಕೆ ನಡೆಸುತ್ತಿದ್ದಾರೆ. ವಕ್ಫ ಆಸ್ತಿ ಎಂದು ತಾತ್ಕಾಲಿಕ ತಡೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚುನಾವಣೆ ಮುಗಿದ ನಂತರ ಮತ್ತೇ ತಮ್ಮ ದುರಾಡಳಿತ ಮುಂದು ವರಿಸಲಿದ್ದಾರೆ. ಬಿಜೆಪಿಯು ಚುನಾವಣೆ ತಂತ್ರಗಾರಿಕೆಗೆ ಹೆದರುವುದಿಲ್ಲ. ಹಿಂದೂ ವಿರೋಧಿ ನೀತಿಯನ್ನು ಕಾಂಗ್ರೆಸ್ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಜಯಕುಮಾರ ಗಡ್ಡಿ, ನಾಗರಾಜ ಕುಲಕಣಿರ್, ಅನಿಲ ಅಬ್ಬಿಗೇರಿ, ಉಷಾ ದಾಸರ, ರಾವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ಎಂ.ಎಂ. ಹಿರೇಮಠ, ಪ್ರಕಾಶ ಅಂಗಡಿ ಇತರರು ಇದ್ದರು.
ತಹಸೀಲ್ದಾ ಕಚೇರಿಗೆ ಮುತ್ತಿಗೆ:
ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಂತರ ತಹಸೀಲ್ದಾರ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಕಚೇರಿ ಮುತ್ತಿಗೆ ಹಾಕಿದರು. ತಹಸೀಲ್ದಾರ ಕಚೇರಿ ಆವರಣದಲ್ಲಿ ನಿಯೋಜಿಸಿದ್ದ ಪೊಲೀಸ್ ಸರ್ಪಗಾವಲನ್ನು ಮೀರಿ ಕಚೇರಿಗೆ ನುಗ್ಗುಲು ಯತ್ನಿಸಿದರು. ತಹಸೀಲ್ದಾರ ಕೊಠಡಿ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆ ಹಿಡಿದರು. ಕಾಂಗ್ರೆಸ್ ವಿರುದ್ಧ ಕಾರ್ಯಕರ್ತರು ದಿಕ್ಕಾರ ಕೂಗಲು ಆರಂಭಿಸಿದರು. ಕಲಹೊತ್ತ ಗಂಭೀರ ವಾತಾವರಣ ಸೃಷ್ಟಿಯಾಘಿತ್ತು. ತಹಸೀಲ್ದಾರ ಅವರು ಆಗಮಿಸಿ ಮನವಿ ಸ್ವೀಕರಿಸಿದ ನಂತರ ವಾತಾವರಣ ತಿಳಿಗೊಂಡಿತು.