ದೇವದುರ್ಗ: ಹಿಂದಿನ ಬಿಜೆಪಿ ಸರ್ಕಾರ ಜನರ ಅಭಿಪ್ರಾಯ ಪಡೆಯದೆ ಅವೈಜ್ಞಾನಿಕವಾಗಿ ರಚನೆ ಮಾಡಿರುವ ಅರಕೇರಾ ತಾಲೂಕನ್ನು ಸರ್ಕಾರ ರದ್ದು ಮಾಡಬೇಕು ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ವಿ.ಎಂ.ಮೇಟಿ ಒತ್ತಾಯಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಚಿವ ಕೆ.ಶಿವನಗೌಡ ನಾಯಕ ರಾಜಕೀಯ ಪ್ರಭಾವ ಬಳಸಿಕೊಂಡು ಜನರ ಅಭಿಪ್ರಾಯ ಪಡೆಯದೆ ಅರಕೇರಾವನ್ನು ಹೊಸ ತಾಲೂಕು ಎಂದು ಘೋಷಿಸಿದ್ದಾರೆ. ಆದರೆ, ಜಾಲಹಳ್ಳಿ, ಗಬ್ಬೂರು ತಾಲೂಕು ರಚಿಸಲು ಜನರು ಹೋರಾಟ ನಡೆಸಿದ್ದರು. ಈ ಎರಡು ಹೋಬಳಿ ಕಡೆಗಣಿಸಿ ಅರಕೇರಾ ತಾಲೂಕು ರಚಿಸಲಾಗಿದೆ.ದೇವದುರ್ಗಕ್ಕೆ ಸಮೀಪವಿರುವ ನೂರಾರು ಹಳ್ಳಿಗಳು ಅರಕೇರಾಗೆ ಸೇರಿಸಲಾಗಿದೆ. ಇದನ್ನು ಖಂಡಿಸಿ ಹಲವು ಗ್ರಾಪಂಗಳು ಹೋರಾಟಕ್ಕೆ ಮುಂದಾಗಿವೆ. ಅರಕೇರಾದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಸಿರವಾರ, ಮಾನ್ವಿಗೆ ಹೋಗುವ ದುಃಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಶಿವನಗೌಡ ನಾಯಕ ಏಕಪಕ್ಷೀಯ ನಿರ್ಧಾರಕ್ಕೆ 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಿದ್ದಾರೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಿ ಅರಕೇರಾ ತಾಲೂಕು ಕೇಂದ್ರವನ್ನು ರದ್ದುಮಾಡಬೇಕು. ಗಬ್ಬೂರು ತಾಲೂಕು ಆಗಲು ಎಲ್ಲ ಅರ್ಹತೆ ಹೊಂದಿದ್ದು ಹೊಸ ತಾಲೂಕು ಆಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ತಾಪಂ ಮಾಜಿ ಸದಸ್ಯ ಗೋವಿಂದರಾಯ, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಮರಿಲಿಂಗಪ್ಪ ಕೊಳ್ಳೂರು, ಆಂಜನೇಯ ಬಡಿಗೇರ, ಮಂಜುನಾಥ ಹೇರುಂಡಿ ಇತರರಿದ್ದರು.