ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲೂ ಪ್ರಸಿದ್ಧಿ ಪಡೆದಿದೆ. ಇತರೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸರಳ ಸಾಮೂಹಿಕ ವಿವಾಹಗಳಿಗೆ ಹೋಲಿಸಿದರೆ ಜಿಲ್ಲೆಯ ಘಾಟಿ ಕ್ಷೇತ್ರ ಈ ಸಾಮಾಜಿಕ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದೆ.
2020 ರಲ್ಲಿ ಮೊದಲ ಬಾರಿಗೆ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ದೊರೆತಿತ್ತು. ಪ್ರಸಕ್ತ ಸಾಲಿನ ವಿವಾಹ ಸೇರಿ ಇದುವರೆಗೆ 6 ಬಾರಿ ಸರಳ ವಿವಾಹ ಕಾರ್ಯಕ್ರಮ ಆಯೋಜನೆಯಾಗಿದ್ದು, 183 ಜೋಡಿಗಳು ಸ್ವಾಮಿಯ ಸಾನ್ನಿಧ್ಯದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಸರಳ ವಿವಾಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿರುವ ಈ ಯೋಜನೆಗೆ ಜಿಲ್ಲೆಯ ಶ್ರೀ ಕ್ಷೇತ್ರದಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
2020ರಲ್ಲಿ ಮೊದಲ ಬಾರಿಗೆ ಆಯೋಜನೆಯಾದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 7 ಜೋಡಿಗಳು ಸಪ್ತಪದಿ ತುಳಿದಿದ್ದವು. 2021 ರಲ್ಲಿ 48 ಜೋಡಿಗಳು ವಿವಾಹ ಬಂಧನಕ್ಕೆ ಒಳಗಾಗುವ ಮೂಲಕ ಕಾರ್ಯಕ್ರಮದ ದೊಡ್ಡಮಟ್ಟದ ಯಶಸ್ಸು ಕಂಡಿತ್ತು. ನಂತರ 2022 ರಲ್ಲಿ 6 ತಿಂಗಳ ಅವಧಿಯಲ್ಲಿ ಎರಡು ಬಾರಿ ನಡೆದ ವಿವಾಹ ಕಾರ್ಯಕ್ರಮದಲ್ಲಿ 30 ಜೋಡಿಗಳು ಹಸೆಮಣೆ ಏರಿದ್ದವು. 2023ರಲ್ಲಿ 32 ಜೋಡಿಗಳು ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು, 2024 ರಲ್ಲಿ ಯಾವುದೇ ನೋಂದಣಿ ಇಲ್ಲದೆ ಕಾರ್ಯಕ್ರಮ ನಡೆದಿರಲಿಲ್ಲ. ಪ್ರಸಕ್ತ 2025 ನೇ ಸಾಲಿನಲ್ಲಿ 66 ಜೋಡಿಗಳು ಹೊಸ ಜೀವನಕ್ಕೆ ಕಾಲಿಡುವ ಮೂಲಕ ಸರಳ ವಿವಾಹ ಕಾರ್ಯಕ್ರಮ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಾಖಲೆ ಬರೆದಂತಾಯಿತು.

ಹೆಚ್ಚು ಪ್ರಚಾರ ಕಾರಣ: ರಾಜ್ಯ ಸರ್ಕಾರ ಮಾಂಗಲ್ಯಭಾಗ್ಯ ಸರಳ ವಿವಾಹ ಕಾರ್ಯಕ್ರಮ ಯೋಜನೆ ಜಾರಿಗೊಳಿಸಿದ ಬಳಿಕ ಇದನ್ನು ಹೆಚ್ಚು ಪ್ರಚಾರ ಮಾಡಲಾಯಿತು. ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದರು. ಸರಳ ವಿವಾಹದ ನಿಬಂಧನೆಗಳು ಸೇರಿ ನಿಯಮಗಳ ಕುರಿತು ಕರಪತ್ರ ಸೇರಿ ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ಮಾಡಿದ್ದರ ಲವಾಗಿ ಜಿಲ್ಲೆ ಸೇರಿ ನೆರೆ ಜಿಲ್ಲೆಯಿಂದಲೂ ಹೆಚ್ಚು ಸ್ಪಂದನೆ ವ್ಯಕ್ತವಾಯಿತು ಎನ್ನಲಾಗಿದೆ.
ಒಂದು ಜೋಡಿಗೆ 63 ಸಾವಿರ ರೂ.ಖರ್ಚು: ವರ್ಷದಿಂದ ವರ್ಷಕ್ಕೆ ಮುಜರಾಜಿ ಇಲಾಖೆ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ನೀಡುವ ಖರ್ಚಿನ ವೆಚ್ಚವೂ ಹೆಚ್ಚಿಸಲಾಗಿದೆ ಪ್ರಸ್ತುತ ವರನಿಗೆ 5 ಸಾವಿರ ನಗದು, ವಧುವಿಗೆ 10 ಸಾವಿರ ರೂ.ನಗದು ಕೊಡಲಾಗುತ್ತದೆ. ವಿವಾಹ ಕಾರ್ಯಕ್ರಮದ ಬಟ್ಟೆ ಮತ್ತಿತರ ವಸ್ತುಗಳಿಗೆ ಬಳಕೆ ಮಾಡಬಹುದು ಹಾಗೆಯೇ 48 ಸಾವಿರ ರೂ.ಮೌಲ್ಯದ ಬಂಗಾರದ ತಾಳಿ ಹಾಗೂ ಗುಂಡುಗಳನ್ನು ನೀಡಲಾಗುತ್ತದೆ. ಇತರೆ ಖರ್ಚು ಸೇರಿ ಜೋಡಿಯೊಂದಕ್ಕೆ 63 ಸಾವಿ ರೂ.ಖರ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಂದಣಿಗೆ ಕಟ್ಟುನಿಟ್ಟು: ಮಾಂಗಲ್ಯ ಭಾಗ್ಯ ಸರಳ ವಿವಾಹ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಕೆಲವೊಂದು ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು. ವಿವಾಹ ಕಾರ್ಯಕ್ರಮದಲ್ಲಿ ಕಾನೂನಿನ ಪ್ರಕಾರ ವಧುವಿಗೆ 18 ಹಾಗೂ ವರನಿಗೆ 21 ವರ್ಷ ವಯಸ್ಸಾಗಿರಬೇಕು, ಇದನ್ನು ಜನನ ಪ್ರಮಾಣ ಪತ್ರದೊಂದಿಗೆ ದೃಢೀಕರಿಸಬೇಕು. ಜತೆಗೆ ಜೋಡಿಗಳಿಗೆ ಇದೇ ಮೊದಲ ಮದುವೆ ಎಂಬುದನ್ನು ದೃಢೀಕರಿಸಲು ಆಯಾ ಪಂಚಾಯಿತಿ ಪಿಡಿಒ, ನಗರಸಭೆ ಅಥವಾ ಪುರಸಭೆಯಿಂದ ದೃಢೀಕರಣ ಪತ್ರ ನೀಡಬೇಕು, ಪಾಲಕರ ಒಪ್ಪಿಗೆ ಕಡ್ಡಾಯ. ಒಂದು ವೇಳೆ ಪಾಲಕರು ನಿಧನರಾಗಿದ್ದರೆ, ಮರಣ ಪ್ರಮಾಣ ಪತ್ರ ಸಲ್ಲಿಸಬೇಕು. ಆಧಾರ್‌ಕಾರ್ಡ್, ರೇಷನ್ ಕಾರ್ಡ್ ಮತ್ತಿತರ ದೃಢೀಕರಣ ಪತ್ರಗಳನ್ನು ಪರಿಶೀಲಿಸಿದ ಬಳಿಕಷ್ಟೇ ನೋಂದಣಿ ಪ್ರಕ್ರಿಯೆ ನಡೆಯಲಿದೆ.
ಸರಳ ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಮಾಂಗಲ್ಯಭಾಗ್ಯ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ದೊಡ್ಡಬಳ್ಳಾಪುರ ತಾಲೂಕು ಶ್ರೀ ಘಾಟಿಯಲ್ಲಿ ನಡೆದುಕೊಂಡು ಬರುತ್ತಿರುವ ಸರಳ ವಿವಾಹ ಕಾರ್ಯಕ್ರಮಕ್ಕೆ ಹೆಚ್ಚು ಸ್ಪಂದನೆ ವ್ಯಕ್ತವಾಗಿದೆ. ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಳ್ಳುವವ ಸಂಖ್ಯೆಯೂ ಹೆಚ್ಚಿದೆ. ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.
ನಾರಾಯಣಸ್ವಾಮಿ, ಘಾಟಿ ಇಒ