ಮಡಿಕೇರಿ: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಮೇ೧೮ ರಂದು ಶನಿವಾರ ರೋಟರಿ ಜಿಲ್ಲೆ ೩೧೮೧ ವತಿಯಿಂದ ಜಿ-೨೦ ಯೋಗ ಶೃಂಗಸಭೆ ಆಯೋಜಿಸಲಾಗಿದೆ ಎಂದು ರೋಟರಿ ಜಿಲ್ಲಾ ಯೋಗ ಹಾಗೂ ಧ್ಯಾನ ಸಮಿತಿ ಸದಸ್ಯ ಬಿ.ಜಿ.ಅನಂತಶಯನ ತಿಳಿಸಿದರು.
ಯೋಗ ಪ್ರಚಾರವು ವಿಶ್ವದ ಎಲ್ಲೆಡೆ ಹಾಗೂ ಎಲ್ಲ ವರ್ಗದಲ್ಲೂ ನಡೆಯುವ ಅವಶ್ಯಕತೆ ಇರುವುದರಿಂದ ಯೋಗ ಶಾಲಾ ಶಿಕ್ಷಕರು ಯೋಗಪಟುಗಳು ಹಾಗೂ ಆಸಕ್ತರೂ ಭಾಗವಹಿಸಬೇಕು. ಶೃಂಗ ಸಭೆಯಲ್ಲಿ ಪದ್ಮಶ್ರೀ ಡಾ.ನಾಗೇಂದ್ರ, ದೇಶಿ ಕೇಂದ್ರ ಮಹಾಸ್ವಾಮಿಗಳು, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಅರಳುಮಲ್ಲಿಗೆ ಪಾರ್ಥಸಾರತಿ, ಆಯುಷ್ ಆಯುಕ್ತರು ಜಿ-೨೦ ದೇಶಗಳ ಪ್ರಮುಖ ನಾಯಕರು ಇತರರು ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದು, ಸಭಿಕರೊಡನೆ ಸಂವಾದ ನಡೆಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶೃಂಗ ಸಭೆಯ ಉದ್ದೇಶ ವಿಶ್ವದಲ್ಲಿ ಯೋಗವನ್ನು ಜನಪ್ರಿಯಗೊಳಿಸುವುದರ ಜತೆಗೆ ಯೋಗ ಕೇಂದ್ರಗಳನ್ನು ಆರಂಭಿಸುವುದಾಗಿದೆ. ರೋಟರಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ, ಪ್ರತಿ ಜಿಲ್ಲೆಗಳಲ್ಲೂ ಯೋಗ ಶೃಂಗ ಸಭೆ ಏರ್ಪಡಿಸುತ್ತಿದೆ. ರೋಟರಿಯ ಸುಮಾರು ಎರಡು ಲಕ್ಷ ಕುಟುಂಬಗಳು ಪಾಲುಗೊಳ್ಳಲಿವೆ ಎಂದೂ ಅನಂತಶಯನ ತಿಳಿಸಿದರು.
ಮೇ೧೮ರಂದು ಬೆಳಿಗ್ಗೆ ೯ ಘಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಯೋಗ ತಜ್ಞರು ಮತ್ತು ಅತಿಥಿಗಳು ಯೋಗ ಮತ್ತು ಧ್ಯಾನದ ಮೂಲಕ ವೈಯಕ್ತಿಕ ಸ್ವಾಸ್ಥ್ಯ ವೃತ್ತಿಪರ ಸ್ವಾಸ್ಥ್ಯ, ರಾಷ್ಟ್ರೀಯ ಸ್ವಾಸ್ಥ್ಯ, ಜಾಗತಿಕ ಸ್ವಾಸ್ಥ್ಯ ಹಾಗೂ ಇತ್ಯಾದಿ ವಿಚಾರ ಮಾತನಾಡಲಿದ್ದಾರೆ. ನಡು ನಡುವೆ ಯೋಗ ಪ್ರದರ್ಶನ, ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದ ಅವರು, ಯೋಗಸಮಾವೇಶದಲ್ಲಿ ನೋಂದಾವಣೆಗೆ ಮತ್ತು ವಿವರಕ್ಕೆ ೯೮೪೪೫೭೬೪೨೯ ಕರೆ ಮಾಡಬಹುದು ಎಂದು ತಿಳಿಸಿದರು.
ರೋಟರಿ ಜಿಲ್ಲಾ ನಿರ್ದೇಶಕ ಎಚ್.ಟಿ.ಅನಿಲ್ ಮಾತನಾಡಿ, ದಕ್ಷಿಣ ಭಾರತದಲ್ಲಿಯೇ ಯೋಗದ ರಾಜಧಾನಿ ಎಂಬ ಹೆಗ್ಗಳಿಕೆಯ ಮೈಸೂರಿನಲ್ಲಿ ಯೋಗ ಶೃಂಗಸಮಾವೇಶ ಆಯೋಜನೆ ಮೂಲಕ ಯೋಗ, ಧ್ಯಾನ ಪ್ರವಾಸೋದ್ಯಮಕ್ಕೂ ನೆರವಾಗಲಿದೆ. ಪ್ರಕೃತಿ ರಮಣೀಯ ಕೊಡಗಿಗೂ ಧ್ಯಾನ, ಯೋಗಾಸಕ್ತರು ಬರುವ ಸಾಧ್ಯತೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ವಲಯ ಸಹಾಯಕ ಗವರ್ನರ್ ದೇವಣಿರ ತಿಲಕ್, ರೋಟರಿ ವಲಯ ಸೇನಾನಿ ಸಂಪತ್ ಕುಮಾರ್, ಮಡಿಕೇರಿ ರೋಟರಿ ಅಧ್ಯಕ್ಷ ನಡಿಕೇರಿಯಂಡ ಅಚ್ಚಯ್ಯ, ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್ ಹಾಜರಿದ್ದರು.