ಮೀಸಲು ಮುಂಬಡ್ತಿ ರಕ್ಷಣೆಗೆ ಪೂರ್ವಸಿದ್ಧತೆ

ಬೆಂಗಳೂರು: ಎಸ್​ಸಿ-ಎಸ್​ಟಿ ನೌಕರರಿಗೆ ನೀಡಲಾಗಿರುವ ಮೀಸಲು ಮುಂಬಡ್ತಿ ರಕ್ಷಿಸುವ ಸಲುವಾಗಿ ರೂಪಿಸಿರುವ ಮೀಸಲು ರಕ್ಷಣೆ ಕಾಯ್ದೆಯ ಜಾರಿಗೆ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಡಿಸಿಎಂ ಡಾ.ಜಿ. ಪರಮೇಶ್ವರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಎಸ್​ಸಿ-ಎಸ್​ಟಿ ನೌಕರರ ಸಂಘದ ಸದಸ್ಯರು, ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಕಾಯ್ದೆ ಅನುಷ್ಠಾನ ಮಾಡದಂತೆ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ಕಾಯ್ದೆಗೆ ತಡೆ ನೀಡುವ ಬಗ್ಗೆಯೂ ಹೇಳಿಲ್ಲದಿರುವಾಗ ಜಾರಿಗೆ ಸರ್ಕಾರ ಹಿಂದೇಟು ಹಾಕಬಾರದು ಎಂದು ನೌಕರರು ಸರ್ಕಾರದ ಮೇಲೆ ಒತ್ತಡ ಹೇರಿದರು. ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಅನೇಕರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಒಪ್ಪಿದ ಪರಮೇಶ್ವರ್, ಪೂರ್ವಸಿದ್ಧತೆ ನಡೆಸುವಂತೆ ಹೇಳಿದರು. ಸಾವಿರಾರು ಎಸ್​ಸಿ-ಎಸ್​ಟಿ ನೌಕರರು ಹಿಂಬಡ್ತಿಯಿಂದ ನೊಂದಿ ರುವುದು ಗಮನಕ್ಕೆ ಬಂದಿದೆ. ಈ ಉದ್ದೇಶದಿಂದಲೇ ಸರ್ಕಾರ ನೂತನ ಕಾಯ್ದೆ ತಂದು, ರಾಷ್ಟ್ರಪತಿ ಅಂಕಿತವನ್ನೂ ಪಡೆದಿದೆ. ಇದನ್ನು ಮತ್ತೆ ಸದನದ ಮುಂದಿಡುವ ಅಗತ್ಯವಿಲ್ಲ. ಹೀಗಾಗಿ ಕಾಯ್ದೆ ಅನುಷ್ಠಾನದಿಂದ ಕಾನೂನು ಉಲ್ಲಂಘನೆ ಆಗುವುದಿಲ್ಲ ಎಂದರು. ಜ. 9ರಂದು ಈ ಬಗ್ಗೆ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಆರಂಭ ವಾಗಲಿದೆ. ಕಾಯ್ದೆ ಜಾರಿ ಮಾಡಬಹುದು ಎಂದು ರಾಜ್ಯದ ಪರ ಸುಪ್ರೀಂಕೋರ್ಟ್​ನಲ್ಲಿ ವಕಾಲತ್ತು ವಹಿಸಿರುವ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಾಟ್ಸ್ ಆಪ್ ಮೆಸೇಜ್ ಮೂಲಕ ತಿಳಿಸಿದ್ದಾರೆ. ಆದರೆ ಅದನ್ನು ಅಧಿಕೃತ ಸಮ್ಮತಿ ಎಂದು ಪರಿಗಣಿಸಲಾಗುವುದಿಲ್ಲ. ಲಿಖಿತವಾಗಿ ವಕೀಲರು ಅಭಿಪ್ರಾಯ ತಿಳಿಸಬೇಕೆಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಮುಕುಲ್ ರೋಹಟಗಿ ಸದ್ಯ ವಿದೇಶ ಪ್ರವಾಸದಲ್ಲಿದ್ದು, 7ಕ್ಕೆ ಮರಳುತ್ತಾರೆ. ಅಂದೇ ಅವರನ್ನು ಭೇಟಿ ಮಾಡಿ ಅಧಿಕೃತ ಹೇಳಿಕೆ ಪಡೆಯೋಣ ಎಂದರು.

ಅಧಿಕಾರಿಗಳಿಗೆ ಆತಂಕ ಬೇಡ

ಕಾಯ್ದೆ ಅನುಷ್ಠಾನದಿಂದ ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ ಎಂಬ ಅಧಿಕಾರಿಗಳ ಮಾತಿಗೆ, ಯಾವುದೇ ಆತಂಕ ಬೇಡ ಎಂದು ಪರಮೇಶ್ವರ್ ಅಭಯ ನೀಡಿದರು. ಅಧಿಕಾರಿಗಳಿಗೆ ಸಮಸ್ಯೆ ಆಗದಂತೆ ಕಾನೂನಿಗೆ ಅನುಗುಣವಾಗಿಯೇ ಮಾಡೋಣ ಎಂದರು.

ಕಾಯ್ದೆ ಜಾರಿ ಆಗುವ ವಿಶ್ವಾಸ

ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಯಾವುದೇ ಕಾನೂನು ತೊಡಕಿಲ್ಲ ಎಂಬುದು ಸಭೆಯಲ್ಲಿ ಸ್ಪಷ್ಟವಾಗಿದೆ. ಕಾಯ್ದೆ ಜಾರಿಯಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಎಸ್​ಸಿ-ಎಸ್​ಟಿ ನೌಕರರ ಸಂಘದ ಸಮನ್ವಯ ಸಮಿತಿ ಕಾನೂನು ಸಲಹೆಗಾರ ಚಂದ್ರಶೇಖರಯ್ಯ ಹೇಳಿದರು. ಕಾಯ್ದೆ ಜಾರಿಗೊಳಿಸದಿದ್ದರೆ ತೀವ್ರ ಹೋರಾಟ ಅನಿವಾರ್ಯ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್ ಹೇಳಿದರು.